ಮಧುಗಿರಿ: ದೇವರಿಗೆ ಕೋಣ ಬಲಿಕೊಡುವ ಪದ್ಧತಿ ನಿಷೇಧವಿದ್ದರೂ ಸಂಪ್ರದಾಯದಂತೆ ಬಲಿ ನೀಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಭಕ್ತರು ದೇಗುಲಕ್ಕೆ ಬೀಗ ಜಡಿದು ಪ್ರತಿಭಟಿಸಿದ್ದರಿಂದ ಶಕ್ತಿ ದೇವತೆ ಶ್ರೀ ದಂಡಿನ ಮಾರಮ್ಮ ಜಾತ್ರೆಗೆ ಆರಂಭದ ದಿನವಾದ ಬುಧವಾರವೇ ವಿಘ್ನ ಉಂಟಾಗಿದೆ.
ಸರ್ಕಾರದ ಆದೇಶದಂತೆ ಕೋಣ ಬಲಿಗೆ ಅವಕಾಶ ನೀಡದ ಅಧಿಕಾರಿಗಳಲ್ಲಿ ಭಕ್ತರು ಅವಕಾಶ ನೀಡುವಂತೆ ಆಗ್ರಹಿಸತೊಡಗಿದರು. ಈ ಗೊಂದಲ ಬೆಳಗ್ಗೆ 11 ಗಂಟೆಯವರೆಗೂ ಮುಂದುವರಿದಿತ್ತು.
500 ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಚಕ್ರ ಶಕ್ತಿಸ್ವರೂಪಿಯಾದ ಶ್ರೀ ದಂಡಿನ ಮಾರಮ್ಮನ ಜಾತ್ರೆ ಆರತಿಯೊಂದಿಗೆ ಆರಂಭವಾಗಿ ಕೋಣ ಬಲಿ ಕೊಡುವ ಸಂಪ್ರದಾಯ ಹಿಂದಿನಿಂದಲೂ ಇತ್ತು. ಈಗ ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಧಾರ್ಮಿಕ ವಿಧಿಗಳು ಸರ್ಕಾರದ ಆದೇಶದಂತೆ ನಡೆಯುತ್ತಿವೆ. 3 ವರ್ಷದಿಂದ ಕೋಣ ಬಲಿಗೆ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದ ರೋಸಿ ಹೋದ ಮಹಿಳಾ ಭಕ್ತರೇ ದೇಗುಲದ ಜಾತ್ರಾ ಕಾರ್ಯ ನಡೆಸಲು ಬಿಡದೆ ತಾವು ಇಲ್ಲೇ ಕೂರುವುದಾಗಿ ದೇಗುಲಕ್ಕೆ ಬೀಗ ಜಡಿದರು.
ತಬ್ಬಿಬ್ಬಾದ ಅಧಿಕಾರಿಗಳು: ಇತಿಹಾಸದಲ್ಲಿ ಎಂದೂ ಭಕ್ತರ ಈ ರೀತಿಯ ವರ್ತನೆ ಕಾಣದ ಅಧಿಕಾರಿಗಳು ಕೆಲ ಕಾಲ ತಬ್ಬಿಬ್ಬಾದರು. ಸರ್ಕಾರದ ಆಜ್ಞೆಯಿಂದ ಕೋಣ ಬಲಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ತಲೆತಲಾಂತರದಿಂದ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ಇತ್ತೀಚೆಗೆ ಇದನ್ನು ನಿಲ್ಲಿಸಿದ್ದರಿಂದ ತಾಲೂಕು ನಿರಂತರ ಬರಗಾಲಕ್ಕೆ ತುತ್ತಾಗುತ್ತಿದೆ. ಹಿಂದೆ ಬಾವಿ ನೀರು ಕುಡಿದರೂ ಯಾವುದೇ ರೋಗಗಳು ಬರುತ್ತಿಲ್ಲ. ಈಗ ಮಿನರಲ್ ನೀರು ಕುಡಿದರೂ ಕಾಯಿಲೆ ಆವರಿಸಿಕೊಳ್ಳುತ್ತಿವೆ. ಹಿಂದಿನ ಸಂಪ್ರದಾಯ ಮುರಿದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂದು ಭಕ್ತರು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಧಿಕಾರಿಗಳು ಗೊಂದಲಕ್ಕೀಡಾದರು.
ಈ ಸಂದರ್ಭದಲ್ಲಿ ಕೋಣ ಹಿಡಿದು ಬಲಿಗೆ ಸಿದ್ಧಗೊಳಿಸಲು ಮುಂದಾದ ಭಕ್ತರನ್ನು ಚದುರಿಸಲು ಹರಸಾಹಸ ಪಟ್ಟ ಪೊಲೀಸರು ವಿಧಿಯಿಲ್ಲದೆ ಲಘು ಲಾಠಿ ಪ್ರಹಾರ ನಡೆಸಿದರು. ಅಧಿಕಾರಿಗಳು ಬಲಿಗೆ ಅವಕಾಶ ನೀಡದ್ದಕ್ಕೆ ಆಕ್ರೋಶಗೊಂಡ ಭಕ್ತರು, ದೇವಿಯ ಉತ್ಸವ ಮೂರ್ತಿಯನ್ನೇ ರಸ್ತೆಯಲ್ಲಿಟ್ಟು ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಅದಕ್ಕೆ ಅವಕಾಶ ನೀಡದೇ ಭಕ್ತರ ಮನವೊಲಿಸಿ ವಾಪಸ್ ಕರೆತಂದರು.
ಬೆಳಗ್ಗೆ 10.30ಕ್ಕೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ ಆಗಮಿಸಿ ಭಕ್ತರು ಹಾಗೂ ದೇಗುಲದ ಸಮಿತಿ ಮುಖ್ಯಸ್ಥರೊಂದಿಗೆ ಚರ್ಚಿಸಿದರು. ಕಾನೂನಾತ್ಮಕವಾಗಿ ಬಲಿಗೆ ಅವಕಾಶವಿಲ್ಲ. ಇದರಿಂದ ನಮಗೂ ಧರ್ಮಸಂಕಟವಾಗಿದೆ. ನೀವೇ ಭಕ್ತರನ್ನು ಮನವೊಲಿಸಿ ಎಂದು ಸಮಿತಿಗೆ ತಿಳಿಸಿದರು. ಆದರೆ ಇದಕ್ಕೆ ಭಕ್ತರು ನಿರಾಕರಿಸಿದರು. ಕೊನೆಯಲ್ಲಿ ಮುಂದೆ ಈ ರೀತಿಯಾಗದಂತೆ ಕ್ರಮವಹಿಸುತ್ತೇನೆ. ಈ ಬಾರಿ ಜಾತ್ರಾ ಮಹೋತ್ಸವ ನಡೆಯಲು ಅವಕಾಶ ನೀಡುವಂತೆ ಭಕ್ತರಲ್ಲಿ ಅಧಿಕಾರಿಗಳು ಮನವಿ ಮಾಡಿದ ನಂತರ ಭಕ್ತರು ದೇಗಲದ ಬೀಗ ತೆಗೆದು ಆರತಿ ಸೇವೆ ನಡೆಸಿದರು.
ಘಟನೆಯನ್ನು ಪೊಲೀಸರು ಸಮರ್ಪಕವಾಗಿ ನಿಭಾಯಿಸಿದ್ದು, ಸಿಪಿಐ ನದಾಫ್, ಪಿಎಸ್‌ಐ ಕಾಂತರಾಜು, ಪಾಲಾಕ್ಷ ಪ್ರಭು, ಹನುಮಂತರಾಯಪ್ಪ ನೇತೃತ್ವದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿತ್ತು. ಸ್ಥಳದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಗೋವಿಂದರಾಜು, ಸದಸ್ಯ ನರಸಿಂಹಮೂರ್ತಿ, ಶೋಭಾ ರಾಮು, ಮಾಜಿ ಸದಸ್ಯ ರಮೇಶ್, ಶ್ರೀನಿವಾಸ್, ಹಳ್ಳಿಕಾರರ ಮುಖಂಡ ತಿಮ್ಮೇಗೌಡ, ಪ್ರಧಾನ ಅರ್ಚಕ ನಾಗಲಿಂಗಾಚಾರ್, ಲಕ್ಷ್ಮಿಕಾಂತಾಚಾರ್, ಕಂದಾಯಾಧಿಕಾರಿ ಜಯರಾಂ ಇದ್ದರು.
ಇಂದು ಗುಗ್ಗರಿ ಗಾಡಿಗಳ ಸೇವೆ: ಪಟ್ಟಣದ ಶ್ರೀದಂಡಿನ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, 10 ದಿನ ನಡೆಯಲಿದೆ. ಮಾ.12ಕ್ಕೆ ಗುಗ್ಗರಿ ಗಾಡಿಗಳ ಸೇವೆ, ಮಾ.13ಕ್ಕೆ ದೇಗುಲದ ವತಿಯಿಂದ ರಥೋತ್ಸವ ನಡೆಯಲಿದೆ. 14ಕ್ಕೆ ಹಳ್ಳಿಕಾರ ವಂಶದವರಿಂದ ಉಯ್ಯಲೆ ಉತ್ಸವ, 15ಕ್ಕೆ ಕುಂಚಿಟಿಗ ವಕ್ಕಲಿಗರಿಂದ ಸಿಂಹವಾಹನ, 16ಕ್ಕೆ ಕುರುಬರಿಂದ ಚಂದ್ರ ಮಂಡಲ ವಾಹನೋತ್ಸವ, 18ಕ್ಕೆ ಹಳ್ಳಿಕಾರರಿಂದ ಭಂಡಾರ ಉತ್ಸವ, 19ರಂದು ಭಕ್ತರಿಂದ ಶ್ರೇಷ್ಟತೆಯ ಸೊಬಗಿನ ಅಗ್ನಿಕುಂಡದ ಸೇವೆ, 20ರಂದು ಕೆರೆಗಳ ಪಾಳ್ಯ, ಚಿನಕವಜ್ರ, ಕವಾಡಿಗರಪಾಳ್ಯ ಗ್ರಾಮಸ್ಥರಿಂದ ಮಡಿಲಕ್ಕಿ ಸೇವೆ ನಡೆದು ಹಳ್ಳಿಕಾರರಿಂದ ಜಾತ್ರೋತ್ಸವ ಮುಕ್ತಾಯಗೊಳ್ಳಲಿದೆ.
ನಾವು ಭಕ್ತರ ಮೇಲೆ ಲಾಠಿ ಪ್ರಹಾರ ನಡೆಸಿಲ್ಲ. ಕೋಣ ಬಲಿ ನೀಡಲು ಮುಂದಾದಾಗ ಕೋಣ ಓಡಿಸಲು ಲಾಠಿ ಎತ್ತಬೇಕಾಯಿತು. ಭಕ್ತರು ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಲು ಬರುತ್ತಿದ್ದಾರೆ ಎಂದು ಭಾವಿಸಿ ಚದುರಿದರು. ಕಾಂತರಾಜು, ಮಧುಗಿರಿ ಪಿಎಸ್‌ಐ ಇದು ನಮ್ಮ ಧರ್ಮದ ನಂಬಿಕೆ. ಇತರೆಡೆ ಪ್ರಾಣಿಬಲಿ ನಡೆದರೂ ಕ್ರಮವಿಲ್ಲ. ಆದರೆ ನಮ್ಮ ಸಂಸ್ಕೃತಿಗೆ ಏಕೆ ಈ ಪ್ರತಿರೋಧ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಸಂಸ್ಕೃತಿಯನ್ನು ಸರ್ಕಾರ ಗೌರವಿಸಬೇಕು. ಡಾ.ಎಂ.ಜಿ.ಶ್ರೀನಿವಾಸಮೂರ್ತಿ,ಧಾರ್ಮಿಕ ಮುಖಂಡ ದೇಗುಲದಲ್ಲಿ ಬಲಿಯ ಸಂಪ್ರದಾಯ ಪುರಾತನವಾದದು. ಇದು ವರ್ಷದಲ್ಲಿ ಒಮ್ಮೆ ನಡೆಯಲಿದೆ. ಈ ಸಂಪ್ರದಾಯ ತಪ್ಪಿದ್ದರಿಂದಲೇ ವಿವಿಧ ರೋಗಗಳು, ಬರಗಾಲ ಬಂದಿದೆ. ಇದು ನಮ್ಮ ನಂಬಿಕೆ. ಇದರಂತೆ ಒಮ್ಮೆ ಅವಕಾಶ ನೀಡಿದರೆ ತಾಲೂಕು ಸುಭಿಕ್ಷವಾಗಿರುತ್ತದೆ. ಎಂ.ಎಸ್.ಚಂದ್ರಶೇಖರ್ ಬಾಬು ಪುರಸಭೆ ಸದಸ್ಯ, ಮಧುಗಿರಿ