ಔರಾದ್: ವ್ಯಕ್ತಿಗಿಂತ ತತ್ವ ಮುಖ್ಯ ಎಂಬುದನ್ನು ಬೌದ್ಧ ಧರ್ಮ ಒತ್ತಿ ಹೇಳುತ್ತದೆ. ವೈಜ್ಞಾನಿಕ ನೆಲೆಗಟ್ಟಿನ ಚಿಂತನೆಯನ್ನು ಬೌದ್ಧ ಧರ್ಮ ಕಲಿಸುತ್ತದೆ. ಎಲ್ಲರೂ ಬುದ್ದ, ಬಸವ, ಅಂಬೇಡ್ಕರರ ಸಂದೇಶಗಳನ್ನು ಆಲಿಸಿ ಅವರ ತತ್ವಗಳ ಪಾಲನೆ ಮಾಡಬೇಕು ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ಕಂದಗುಳ ಬುದ್ಧ ವಿಹಾರದಲ್ಲಿ ಸಿದ್ದಾರ್ಥ ಸೋಶಿಯಲ್ ವೇಲ್ ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಬಣ)ದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಧಮ್ಮಚಕ್ರ ಪರಿವರ್ತನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ೧೯೫೬ರ ಅ.೧೪ರಂದು ನಾಗಪುರದ ದೀಕ್ಷಾ ಭೂಮಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ಸರಿ ಸುಮಾರಿನ ೬೦೦೦೦೦ ಲಕ್ಷ ಅನುಯಾಯಿಗಳು ಬೌದ್ಧ ಧರ್ಮ ಸ್ವೀಕಾರ ಮಾಡಿರುವ ಐತಿಹಾಸಿಕ ದಿನವನ್ನು ಧಮ್ಮ ಚಕ್ರ ಪರಿವರ್ತನಾ ದಿನವನ್ನಾಗಿ ಆಚರಿಸಲಾಗುತ್ತದೆ. ಬೌಧ್ಧ ಧರ್ಮಿಯರಿಗೆ ಇದೊಂದು ಪವಿತ್ರವಾದ ದಿನವಾಗಿದೆ. ಪ್ರತಿಯೊಬ್ಬರೂ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕು. ದೇಶದ ಉತ್ತಮ ನಾಗರಿಕ ಆಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಅನ್ನುವುದು ಡಾ.ಅಂಬೇಡ್ಕರ್‌ರು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಮಹಾತ್ಮರ ಸಂದೇಶಗಳು ಜಗತ್ತಿಗೆ ಸಾರಬೇಕು. ಬದುಕಿನಲ್ಲಿ ಆರ್ಥಿಕ ಸದೃಢತೆ ಮತ್ತು ಸ್ವಾಭಿಮಾನ ರೂಢಿಸಿಕೊಂಡು ಪರಸ್ಪರ ಸಹಕಾರ ಮನೋಭಾವದಿಂದ ಪ್ರಗತಿ ಸಾಧಿಸುವುದನ್ನು ಕಲಿಯಬೇಕು ಎಂದರು.
ಶಿವಶರಣಪ್ಪ ಹುಗ್ಗೆ, ವಿಶ್ವನಾಥ ದೀನೆ, ಕಾಶಿನ್ನಾಥ ಪಾಟೀಲ್, ಪಿಡಿಒ ಶರಣಪ್ಪ ಗಾದಗೆ, ವಿಶಾಲ ದೊಡ್ಡಿ, ಧನರಾಜ್ ಮುಸ್ತಾಪುರೆ, ಬಾಲಾಜಿ ಪಾಟೀಲ್, ಸತೀಶ ವಗ್ಗೆ, ಮಹೀಂದ್ರ, ಸಾಯಿ ಶಿಂಧೆ, ಪ್ರಭು ಕಾಂಬಳೆ, ಪಿಎಸ್‌ಐ ನಂದಕುಮಾರ್ ಮುಳೆ, ಎಎಸ್‌ಐ ಶೇಷರಾವ್ ಇತರರಿದ್ದರು. ಸಂಜುಕುಮಾರ್ ಲಾಧಾ ನಿರೂಪಣೆ ಮಾಡಿದರು.