ನಂಜನಗೂಡು: ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ವತಿಯಿಂದ ಧಮ್ಮ ಪಯಣ ಮತ್ತು ಧಮ್ಮ ದೀಪ ಯಾನ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕೊಳ್ಳೇಗಾಲದ ಚೇತನವನದ ಬೌದ್ಧ ವಿಹಾರದ ಶ್ರೀ ಸುಗತಪಾಲ ಬಂತೇಜಿ, ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಸಾಹಿತಿ ಮಲ್ಕುಂಡಿ ಮಹದೇವಸ್ವಾಮಿ ನೇತೃತ್ವದಲ್ಲಿ ವಿಮೋಚನಾ ಯುವಕರ ಸಂಘ ಚುಂಚನಹಳ್ಳಿ ಸಹಯೋಗದಲ್ಲಿ ಆಯೋಜಿಸಿದದ ಕಾರ್ಯಕ್ರಮವನ್ನು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಬುದ್ಧ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಬುದ್ಧ ಮತ್ತು ಅಂಬೇಡ್ಕರ್ ಮೂರ್ತಿಗೆ ಮಹಿಳೆಯರು, ಮಕ್ಕಳು ಹಾಗೂ ಯುವಕರು ಪುಷ್ಪಾರ್ಚನೆ ಮಾಡಿ, ದೀಪ ಹಚ್ಚಿ ಬುದ್ಧನ ಸ್ಮರಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಅಂಬೇಡ್ಕರ್ ಅವರ ಧಮ್ಮ ಮಾರ್ಗದರ್ಶನದಲ್ಲಿ ಸುಮಾರು 10 ಸಾವಿರ ಮನೆಗಳಲ್ಲಿ ಧಮ್ಮ ದೀಪ ಹಚ್ಚುವ ಕಾರ್ಯಕ್ರಮ ರೂಪಿಸಲಾಗಿದೆ. 100 ಮೈಲಿಗಳ ಧಮ್ಮ ಪಯಣದಲ್ಲಿ ಪ್ರತಿ ಗ್ರಾಮಗಳ ಮನೆ ಮತ್ತು ಮನಗಳಲ್ಲಿ ದೀಪಯಾನ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರು ಅ.14 ರಂದು ಬೌದ್ಧ ಧಮ್ಮ ಸ್ವೀಕರಿಸಿ ಇಂದಿಗೆ 68 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ಧಮ್ಮ ದೀಪ ಹಚ್ಚುವ ಕಾರ್ಯಕ್ರಮ ಆಯೊಜಿಸಲಾಗಿದೆ. ಪ್ರತಿ ಮನೆಯಲ್ಲಿ ಅಂಬೇಡ್ಕರ್ ಅವರನ್ನು ನೆನೆದು ಅ.14ರ ತನಕ ದೀಪ ಹಚ್ಚಿ ಭಗವಾನ್ ಗೌತಮ ಬುದ್ಧರಿಗೆ ಪ್ರಾರ್ಥನೆ ಸಲ್ಲಿಸಬೇಕು. ಯುವಕರು ಮತ್ತು ಮಹಿಳೆಯರು ಬುದ್ಧ ಮತ್ತು ಅಂಬೇಡ್ಕರ್ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಸದಸ್ಯ ಮಹದೇವ್, ಮುಖಂಡರಾದ ನಾಗಯ್ಯ, ಸುರೇಶ್, ಮಲ್ಲೇಶ್, ಸೋಮೇಶ್, ದೇವರಾಜ್, ವಿಮೋಚನಾ ಯುವಕರ ಸಂಘದ ಗೌರವಾಧ್ಯಕ್ಷ ಸಂಜಯ್, ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಪ್ರವೀಣ್, ಸಹಕಾರ್ಯದರ್ಶಿ ಹರ್ಷನ್, ಜಗದೀಶ್, ಸಿ. ಮಹದೇವಸ್ವಾಮಿ, ಬಿ.ಶಿವಕುಮಾರ್, ಮಣಿಕಂಠ, ಅಭಿಷೇಕ್ ಇತರರು ಭಾಗವಹಿಸಿದ್ದರು.