ವಿಜಯಪುರ ಜಲನಗರದ ಸಾರಿಪುತ್ರ ಬೋಧಿಧಮ್ಮ ಮಹಾಬುದ್ಧ ವಿಹಾರದಲ್ಲಿ ಝೆನ್ ಮಾಸ್ಟರ್ ಡಾ.ಶಾಕು ಬೋಧಿಧಮ್ಮ ಸುದ್ದಿಗೋಷ್ಠಿ ನಡೆಸಿದರು. ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ಸುರೇಶ ಘೊಣಸಗಿ, ಕೆ.ಎಂ. ಕೂಡಲಿ ಮತ್ತಿತರರಿದ್ದಾರೆ.  
ಜಿಲ್ಲೆ

ಧಮ್ಮಚಕ್ರ ಪರಿವರ್ತನ ದಿನ-ವರ್ಷಾವಾಸದ ಸಮಾರೋಪ; ಯಾವಾಗ? ಹೇಗಿರಲಿದೆ ಗೊತ್ತಾ?

ವಿಜಯಪುರ: ನಗರದ ಬೌದ್ಧ ವಿಹಾರ ನಿರ್ಮಾಣ ಸಮಿತಿಯಿಂದ ಅ. 14 ರಂದು ಬೆಳಗ್ಗೆ 11.30ಕ್ಕೆ ಜಲನಗರದ ಸಾರಿಪುತ್ರ ಬೋಧಿಧಮ್ಮ ಮಹಾಬುದ್ಧ ವಿಹಾರದಲ್ಲಿ ಧಮ್ಮಚಕ್ರ ಪರಿವರ್ತನ ದಿನ-ವರ್ಷಾವಾಸ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಝೆನ್ ಮಾಸ್ಟರ್ ಡಾ.ಶಾಕು ಬೋಧಿಧಮ್ಮ ತಿಳಿಸಿದರು.

ಈಗಾಗಲೇ ಧಮ್ಮಚಕ್ರ ಪರಿವರ್ತನ ದಿನ-ವರ್ಷಾವಾಸದ ಹಿನ್ನೆಲೆ ಧ್ಯಾನ ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯದ ನಾನಾಭಾಗಗಳಿಂದ ಆಗಮಿಸಿದ ಉಪಾಸಕರು ಭಾಗವಹಿಸಿ ಬೌದ್ಧ ಧಮ್ಮ ಸಂದೇಶಗಳನ್ನು ಅರಿತುಕೊಂಡಿದ್ದಾರೆ. ಇದೀಗ ಸಮಾರೋಪ ಸಮಾರಂಭವನ್ನು ಅರ್ಥಪೂರ್ಣವಾಗಿ ನೆರವೇರಿಸಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಭಗವಾನ ಬುದ್ಧರು ಸಾರನಾಥದಲ್ಲಿ ಧಮ್ಮೋಪದೇಶ ಮಾಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಧಮ್ಮ ಚಕ್ರವನ್ನು ಉರುಳಿಸಿದರು. ನಂತರ ಸಾಮ್ರಾಟ್ ಅಶೋಕರು ಕಳಿಂಗ ಯುದ್ಧದ ನಂತರ ಮನಪರಿವರ್ತನೆಗೊಂಡು ಶಸ್ತ್ರತ್ಯಾಗ ಮಾಡಿ, ಎರಡನೆಯ ಬಾರಿಗೆ ಧಮ್ಮ ಚಕ್ರವನ್ನು ಉರುಳಿಸಿದರು. ಸಾಮ್ರಾಟ ಅಶೋಕರು ಅವನ್ನು ತಮ್ಮ ಧಮ್ಮ ವಿಜಯವೆಂದು ಘೋಷಿಸಿಕೊಂಡರು. ಆಧುನಿಕ ಭಾರತದಲ್ಲಿ ಬೋಧಿಸತ್ವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಅಶೋಕ ವಿಜಯದಶಮಿಯ ದಿವಸ ನಾಗಪುರದಲ್ಲಿ ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮವನ್ನು ಸ್ವೀಕರಿಸುವ ಮೂಲಕ ಮೂರನೆಯ ಬಾರಿಗೆ ಧಮ್ಮ ಚಕ್ರವನ್ನು ಉರುಳಿಸಿದರು. ಹೀಗಾಗಿ ಬೌದ್ಧ ಧಮ್ಮದಲ್ಲಿ ವಿಜಯದಶಮಿ ಮತ್ತು ಧಮ್ಮ ಚಕ್ರ ಪರಿವರ್ತನ ದಿನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಅವರು ತಿಳಿಸಿದರು.

ವರ್ಷಾವಾಸದ ಮಹತ್ವ

ಭಗವಾನ ಬುದ್ಧರು ಬೋಧಗಯಾದಲ್ಲಿ (ಉರುವೇಲ) ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದಾಗ ಅವರು ತನ್ನ ಐವರು ಹಿಂದಿನ ಸಹಚರರಿಗೆ ಧಮ್ಮಚಕ್ರ ಪವತ್ತನ ಸೂತ್ರವನ್ನು ಬೋಧಿಸಿದರು. ಈ ಉಪದೇಶವನ್ನು ಆಷಾಢ ಪೂರ್ಣಿಮೆಯ ದಿನದಂದು ನೀಡಲಾಯಿತು. ಇದರ ನಂತರ ಮೊದಲ ವರ್ಷಾವಾಸವು (ಮಳೆಗಾಲದಲ್ಲಿ ವಾಸ) ಸಾರನಾಥದಲ್ಲಿ ನಡೆಯಿತು. ಭಗವಾನ ಬುದ್ಧರು ಪ್ರಮುಖ ಧಮ್ಮೋಪದೇಶವನ್ನು ನೀಡಿದ ಮತ್ತು ಭಿಕ್ಷು ಸಂಘವನ್ನು ಸ್ಥಾಪಿಸಿದ ಸ್ಥಳವಾಗಿದೆ. ಹೀಗಾಗಿ, ಪ್ರಾಚೀನ ಬೌದ್ಧ ಸಾಹಿತ್ಯ ಮತ್ತು ಪರಂಪರೆಯ ಪ್ರಕಾರ, ಗೌತಮ ಬುದ್ಧರು ತಮ್ಮ ವರ್ಷಾವಾಸವನ್ನು ಸಾರನಾಥದಲ್ಲಿ ಕಳೆದಿದ್ದಾರೆಂಬುದು ಐತಿಹಾಸಿಕವಾಗಿ ವಿಶ್ವಾಸಾರ್ಹವಾಗಿದೆ.

ವರ್ಷವಾಸ (ಮಳೆಗಾಲ ವಾಸ) ಬೌದ್ಧಧರ್ಮದಲ್ಲಿ ವಿಶೇಷ ಮತ್ತು ಪ್ರಮುಖ ಅವಧಿಯಾಗಿದ್ದು, ಮಳೆಗಾಲದ ಮೂರು ತಿಂಗಳುಗಳಲ್ಲಿ ಬೌದ್ಧ ಭಿಕ್ತಗಳು ಒಂದೇ ಸ್ಥಳದಲ್ಲಿ ವಾಸಿಸುವ ಸಮಯ ಧ್ಯಾನ ಮತ್ತು ಸಾಧನಕ್ಕೆ ಹೆಚ್ಚಿನ ಒತ್ತು ನೀಡಿ ಮತ್ತು ಪ್ರಯಾಣವನ್ನು ತಪ್ಪಿಸಿದರು. ವರ್ಷಾವಾಸದ ಸಮಯದಲ್ಲಿ, ಧ್ಯಾನ ಮತ್ತು ಆಳವಾದ ಆಧ್ಯಾತ್ಮಿಕ ಅಭ್ಯಾಸದಲ್ಲಿ ಸಮಯವನ್ನು ಕಳೆಯುತ್ತಾರೆ. ಅವರ ಮಾನಸಿಕ ಬೆಳವಣಿಗೆ ಮತ್ತು ಆಂತರಿಕ ಶುದ್ದೀಕರಣಕ್ಕೆ ಇದು ಮಹತ್ವದ್ದಾಗಿದೆ. ಹೀಗಾಗಿ ಜಿಲ್ಲೆಯ ಭಗವಾನ ಬುದ್ಧ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಅನುಯಾಯಿಗಳು, ಪ್ರಗತಿಪರ ಚಿಂತಕರು, ದಲಿತ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಬೌದ್ಧ ವಿಹಾರ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿ, ಅ. 14ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಪಂಚಾಯಿತಿ ಕ್ರಾಸ್ ಹತ್ತಿರದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿ, ಬುದ್ಧ ವಿಹಾರದವರೆಗೆ ಭಗವಾನ್ ಬುದ್ಧ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಧಮ್ಮ ರಥಯಾತ್ರೆ ನಡೆಯಲಿದೆ. ಬಳಿಕ 11.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ಸುರೇಶ ಘೊಣಸಗಿ, ಕೆ.ಎಂ. ಕೂಡಲಿ ಮತ್ತಿತರರಿದ್ದರು.