ಮಂಗಳೂರು: ಕಾನೂನು ಸುವ್ಯವಸ್ಥೆಗೆ ಭಂಗ ತರುವ ಘಟನೆಗಳು ನಡೆದಾಗ ಪಬ್ಲಿಕ್ ಇಂಟೆಲಿಜೆನ್ಸ್ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಘಟನೆಯನ್ನು ನೋಡಿದವರು ಆರೋಪಿಗಳ ಪರಿಚಯ ಇರುವವರು ಇಲಾಖೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಇಲಾಖೆಗೆ ಸಹಕರಿಸಿದರೆ ಇಂತಹ ಪ್ರಕರಣಗಳನ್ನು ಶೀಘ್ರದಲ್ಲಿ ಭೇದಿಸಬಹುದು. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕರಿಸಬೇಕಾಗಿರುವುದು ನಾಗರಿಕರ ಕರ್ತವ್ಯ ಎಂದು ಡಿಜಿಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರಗೊಂದಿಗೆ ಮಾನತಾಡಿದರು. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತಮ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿಗಳಿ ಸಿಕ್ಕಿಬಿದ್ದಿದ್ದು, ಉಳಿದವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ನಮಗೆ ಎನ್‌ಐಎ ಮೊದಲಾದ ಏಜೆನ್ಸಿಗಳು ಸಹಕರಿಸುತ್ತಿವೆ.
ಫಾಜಿಲ್ ಹತ್ಯೆಗೆ ಬಳಸಲಾದ ಕಾರು ವಶಪಡಿಸಿಕೊಳ್ಳಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಈ ಕೊಲೆಗಳ ಮಧ್ಯೆ ಲಿಂಕ್ ಇದೆಯೇ ಎನ್ನುವುದನ್ನು ಈ ಹಂತದಲ್ಲಿ ಹೇಳಲಾಗುವುದಿಲ್ಲ. ಶವಗಳಿಗೆ ಯಾವುದೇ ಜಾತಿ ಇರುವುದಿಲ್ಲ ನಮಗೆ ಎಲ್ಲ ಸಾವುಗಳು ಕೂಡ ಒಂದೇ. ಕೇರಳ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಗಳನ್ನು ಬಿಗಿಗೊಳಿಸಲಾಗಿದೆ ಎಂದು ತಿಳಿಸಿದರು.