ಮೂಡುಬಿದಿರೆ : ಉಡುಪಿ ಪೇಜಾವರ ಅಧೋಕ್ಷಜ ಮಠದ ನೇತೃತ್ವದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲ ಮತ್ತು ಬೆಂಗಳೂರು ಪೂರ್ಣಪ್ರಜ್ಞಾ ವಿದ್ಯಾಪೀಠ ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹಿಂದು ಸಮಾಜದ ಸೌಹಾರ್ದ ಸಂಘಟನೆಗಾಗಿ ಹಮ್ಮಿಕೊಳ್ಳಲಾಗಿರುವ ಭಕ್ತಿ ರಥಯಾತ್ರೆಯನ್ನು ಮೂಡುಬಿದಿರೆಯಲ್ಲಿ ಸ್ವಾಗತಿಸಲಾಯಿತು.
ಬಸ್ ನಿಲ್ದಾಣ ಪ್ರವೇಶಿಸಿದ ರಥಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಜೈನ ಮಠಾಧೀಶ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಧರ್ಮ, ಆಚಾರ್ಯರು, ಸದ್ವಿಚಾರಗಳಿಗೆ ಶರಣಾಗುವುದೇ ಭಕ್ತಿ. ಶಕ್ತಿವಂತರು ದುರ್ಬಲರಿಗೆ ದಯೆ ತೋರಿಸಿ, ಉಳ್ಳವರು ದಾನ ಮಾಡಿ ಎಂದು ಸಲಹೆ ನೀಡಿದರು.
ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಭಕ್ತಿ ರಥಯಾತ್ರೆ ಹಿಂದು ಸಮಾಜದ ಮೇಲಿರುವ ಸಂದೇಹಕ್ಕೆ ಸಾಧು ಸಂತರ ಮೂಲಕ ಪರಿಹಾರ ನೀಡಲಿದೆ ಎಂದರು.
ಉದ್ಯಮಿ ಶ್ರೀಪತಿ ಭಟ್, ಬಿಜೆಪಿ ಮುಖಂಡ ಸುದರ್ಶನ ಎಂ., ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರು, ಎಂ.ಸಿ.ಎಸ್. ಬ್ಯಾಂಕ್ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ ಎಂ., ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರ್, ವಿಹಿಂಪ ಮುಖಂಡ ಶ್ಯಾಮ್ ಹೆಗ್ಡೆ, ಅಲಂಗಾರ್ ದೇವಸ್ಥಾನದ ಪ್ರಮುಖ ಸುಬ್ರಹ್ಮಣ್ಯ ಭಟ್, ಶಾಂತಾರಾಮ ಕುಡ್ವ ಮತ್ತಿತರರು ಭಾಗವಹಿಸಿದ್ದರು.
ರಥಯಾತ್ರೆ ಪ್ರಮುಖರಾದ ಕೃಷ್ಣರಾಜ್ ಕುತ್ಪಾಡಿ, ಶಶಾಂಕ್ ಭಟ್ ವೇಣೂರು ಮಾತನಾಡಿ, ಹಿಂದು ಸಮಾಜದ ಒಗ್ಗೂಡುವಿಕೆಗಾಗಿ ಪೇಜಾವರ ಮಠ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ಏ.9ರಿಂದ 13ರವರೆಗೆ ರಥಯಾತ್ರೆ ಸಂಚರಿಸಲಿದೆ ಎಂದರು.