ರಟ್ಟಿಹಳ್ಳಿ: ತಾಲೂಕಿನ ಬುಳ್ಳಾಪುರ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ 9 ದಿವಸಗಳ ಕಾಲ ದಸರಾ ಹಬ್ಬದ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ವೈಭವಯುತವಾಗಿ ಜರುಗಿತು. ಬುಧವಾರ ದೇವಿಯ ಆರಾಧಕರು ಪವಾಡ ಪುರುಷರು ಲೋಕ ಕಲ್ಯಾಣಾರ್ಥವಾಗಿ ಕಿಚ್ಚು ಹಾಯುವ ಮೂಲಕ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಬುಳ್ಳಾಪುರ ಗ್ರಾಮದ ದುರ್ಗಾದೇವಿ ಆರಾಧಕರಾದ ಪವಾಡ ಪುರಷ ಬಸವರಾಜ ಮುಡಬಾಗಿಲು, ಹಾಡೆ ಗ್ರಾಮದ ರಾಜಪ್ಪ ಕಿರಗೇರಿ ಅವರು ಕಳೆದ 9 ದಿವಸಗಳಿಂದ ಉಪವಾಸ ವೃತ ಕೈಗೊಂಡಿದ್ದರು. ಬೆಳಗ್ಗೆ 6.15ಕ್ಕೆ ದೇವಸ್ಥಾನದ ಆವರಣದಲ್ಲಿ ಹಾಕಿರುವ ಅಗ್ನಿಕುಂಡದಲ್ಲಿ 3 ಬಾರಿ ಕಿಚ್ಚು ಹಾಯ್ದರು. ಕೊನೆಯ ಬಾರಿ ಕಿಚ್ಚು ಹಾಯುವ ವೇಳೆ ಉಡಿಯಲ್ಲಿ ಅಗ್ನಿ ಕೆಂಡವನ್ನು ಹಾಕಿಕೊಂಡು ದೇವಸ್ಥಾನ ಪ್ರವೇಶ ಮಾಡಿದರು.
ಕಿಚ್ಚು ಹಾಯುವ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ದೇವಿಯ ಭಕ್ತರು ಆಗಮಿಸಿದ್ದರು. ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷವೂ ಕಿಚ್ಚು ಹಾಯುವ ಪದ್ಧತಿಯನ್ನು ಇಲ್ಲಿನ ಭಕ್ತರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ದೇವಸ್ಥಾನದ ಕಮಿಟಿ ಅಧ್ಯಕ್ಷ ಚಂದ್ರಪ್ಪ ಬಡಪ್ಪನವರ ಮತ್ತು ಕಾರ್ಯದರ್ಶಿ ಮಹೇಶಪ್ಪ ಸೊರಟೂರ ತಿಳಿಸಿದ್ದಾರೆ.