ಜಿಲ್ಲೆ

ಸಾತೇನಹಳ್ಳಿ ಶಾಂತೇಶ ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು

ಹಿರೇಕೆರೂರ: ಅಧಿಕ ಮಾಸದ ಮೊದಲ ಶನಿವಾರ ತಾಲೂಕಿನ ಸಾತೇನಹಳ್ಳಿಯ ಶಾಂತೇಶ (ಮಾರುತಿ) ದೇವರ ದರ್ಶನಕ್ಕೆ ಭಕ್ತ ಸಮೂಹ ಹರಿದು ಬಂದಿತ್ತು.

ಸುರಿಯುತ್ತಿರುವ ಮಳೆ ಲೆಕ್ಕಿಸದೆ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ಧಾರವಾಡ, ಗದಗ, ಶಿರಸಿ, ಬೆಳಗಾವಿ, ಬೆಂಗಳೂರು, ಕಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾತೇನಹಳ್ಳಿ ಗ್ರಾಮದ ಶಾಂತೇಶ ಸ್ವಾಮಿ ದರ್ಶನ ಪಡೆದರು.
ಭಕ್ತರ ವಾಹನಗಳನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು. ಕದರಮಂಡಲಗಿ ಆಂಜನೇಯನ ದರ್ಶನ ಪಡೆದು, ಹಂಸಭಾವಿ ಕಡೆಯಿಂದ ಬರುವ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವುದನ್ನು ತಪ್ಪಿಸಿ, ಉತ್ತಮ ವ್ಯವಸ್ಥೆಯನ್ನು ಪೊಲೀಸರು ಕಲ್ಪಿಸಿದ್ದರು.

ಅಧಿಕ ಮಾಸದಲ್ಲಿ ತಾಲೂಕಿನ ಸಾತೇನಹಳ್ಳಿ ಗ್ರಾಮದ ಶಾಂತೇಶ (ಮಾರುತಿ), ಬ್ಯಾಡಗಿ ತಾಲೂಕಿನ ಕದರಮಂಡಲಗಿ ಆಂಜನೇಯ (ಕಾಂತೇಶ), ಶಿಕಾರಿಪುರದ ಹುಚ್ಚರಾಯಸ್ವಾಮಿ (ಬ್ರಾಂತೇಶ) ದೇವರ ದರ್ಶನವನ್ನು ಅಧಿಕ ಮಾಸದ ಶನಿವಾರ ಒಂದೇ ದಿನ ಪಡೆದರೆ ಕಾಶಿಯಾತ್ರೆ ಮಾಡಿದ ಫಲ ಪ್ರಾಪ್ತಿಯಾಗುತ್ತದೆ ಎಂಬ ಪುರಾಣೋಕ್ತಿಯಿದೆ.