ಹಾಸನ: ಶಕ್ತಿ ಯೋಜನೆಯಿಂದ ರಾಜ್ಯದ ವಿವಿಧ ಮೂಲೆಗಳಿಂದ ಹಾಸನಾಂಬ ದರ್ಶನಕ್ಕೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಗೊಳಿಸಿದ್ದು ಸಾರ್ಥಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಗುರುವಾರ ಸರತಿ ಸಾಲಿನಲ್ಲಿ ಬಂದು ಹಾಸನಾಂಬ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಬಾರಿ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ನಾನು ಉತ್ತರ ಕರ್ನಾಟಕದವಳಾದರೂ ಹಾಸನಾಂಬ ಮಹಾತ್ಮೆ ಕೇಳಿದ್ದೇನೆ. ವಿಶ್ವದಾದ್ಯಂತ ಹಾಸನಾಂಬಗೆ ಭಕ್ತರಿದ್ದಾರೆ. ಮಧ್ಯಾಹ್ನ 12 ಗಂಟೆ ನಂತರ ಬಂದರೆ ಶಿಷ್ಟಾಚಾರದ ವಾಹನಗಳಲ್ಲಿ ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ಸಾವಿರ ರೂ. ಟಿಕೆಟ್ ಸಾಲಿನಲ್ಲಿ ತೆರಳಬೇಕಾಗುತ್ತದೆಂದು ಹೇಳಿದ್ದರು. ಹಾಸನಾಂಬ ತಾಯಿ ಎಷ್ಟು ಗಂಟೆಗೆ ಕರೆಸಿಕೊಳ್ಳುತ್ತಾಳೋ ಅಷ್ಟು ಗಂಟೆಗೆ ಬರುತ್ತೇನೆಂದು ಜಿಲ್ಲಾಧಿಕಾರಿಗೆ ಹೇಳಿದ್ದೆ. ದೇವಿ ಮುಂದೆ ಸಚಿವರು, ಸಾಮಾನ್ಯರು ಎಂಬ ತಾರತಮ್ಯ ಸರಿಯಲ್ಲ. ಸಾವಿರ ರೂ. ಸಾಲಿನಲ್ಲಿ ಬಂದಿದ್ದೇನೆಂದರು.
ಉತ್ತಮ ಮಳೆಯಾಗಿ ರೈತರು ಸಂತೋಷದಿಂದ ಇರಲಿ. ಬೆಳೆಗೆ ಒಳ್ಳೆಯ ಬೆಲೆ ದೊರೆಯಲಿ. ನಮ ದೇಶದ ಮೇಲೆ ಯಾವುದೇ ಕರಿನೆರಳು ಬೀಳಬಾರದು ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ಗೃಹಲಕ್ಷ್ಮಿ ಹಣ ಪಾವತಿ ಸಕಾಲಕ್ಕೆ ಆಗುತ್ತಿದೆ. ಜುಲೈ ತಿಂಗಳ ಹಣ ಮೂರ್ನಾಲ್ಕು ದಿನಗಳ ಹಿಂದೆ ಜಮೆಯಾಗಿದೆ. ಆಗಸ್ಟ್ ತಿಂಗಳ ಹಣ ದೀಪಾವಳಿಯೊಳಗೆ ಬಿಡುಗಡೆಯಾಗುತ್ತದೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಾಮಾನ್ಯ ಭಕ್ತರಂತೆ ಬಂದ ಸಚಿವೆ
ಹಾಸನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾವಿರ ರೂ. ಟಿಕೆಟ್ ಖರೀದಿಸಿ ಭಕ್ತರೊಂದಿಗೆ ಸರದಿ ಸಾಲಿನಲ್ಲಿ ಬಂದು ದೇವಿ ದರ್ಶನ ಪಡೆದರು.
ರಾತ್ರಿ 8 ಗಂಟೆಗೆ ನಗರಕ್ಕೆ ಆಗಮಿಸಿದ ಅವರು ಕುಟುಂಬಸ್ಥರು ಹಾಗೂ ಆಪ್ತ ಸಹಾಯಕರಿಗೆ ಸಾವಿರ ರೂ. ಟಿಕೆಟ್ ಖರೀದಿಸಿ ಸರದಿ ಸಾಲಿನಲ್ಲಿ ಹೆಜ್ಜೆ ಹಾಕಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಅವರು ಸರದಿ ಸಾಲಿನಲ್ಲೇ ಬ್ಯಾರಿಕೇಡ್ ತೆರೆದು ದಾರಿ ಮಾಡಿಕೊಡುವುದಾಗಿ ಹೇಳಿದರಾದರೂ ಹಾಸನಾಂಬ ತಾಯಿ ಮುಂದೆ ಎಲ್ಲರೂ ಒಂದೇ. ಜನರೊಂದಿಗೆ ಹೋಗುತ್ತೇನೆಂದು ಸಾಗಿದರು. ಅರ್ಧ ದಾರಿ ಕ್ರಮಿಸಿದ ಮೇಲೆ ಜನದಟ್ಟಣೆ ಹೆಚ್ಚಾಗಿ ಸಚಿವರು ನಿಂತಿದ್ದ ಸಾಲು ಮುಂದೆ ಸಾಗದೆ ನಿಲ್ಲಬೇಕಾಯಿತು. ಈ ವೇಳೆ ಜನರನ್ನು ಪಕ್ಕಕ್ಕೆ ಸರಿಸಲು ಪೊಲೀಸರು ಮುಂದಾದಾಗ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಚಿವರು ಜನರೊಂದಿಗೆ ಹೆಜ್ಜೆ ಹಾಕಿದರು.