ಕೂಡಲಸಂಗಮ : ವರ್ಷಕ್ಕೆ ಮೂರು ದಿನ ಮಾತ್ರ ಭಕ್ತರ ದರ್ಶನಕ್ಕೆ ದೊರೆಯುವ ಸಂಗಮನಾಥನ ಕಲಶದ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದ ಅಪಾರ ಭಕ್ತರು ಆಗಮಿಸಿದ್ದರು. ಕೆಲವು ಭಕ್ತರು ಬಂಗಾರದ ಕಲಶ ಹೊತ್ತು ನಡೆದರೆ ಇನ್ನೂ ಕೆಲವರು ಸ್ಪರ್ಶಿಸಿ ಸಂಭ್ರಮಪಟ್ಟರು.
ಜಿಲ್ಲಾ ಖಜಾನೆಯಲ್ಲಿ ವರ್ಷವಿಡಿ ಭದ್ರತೆಯಲ್ಲಿರುವ ಸಂಗಮೇಶ್ವರ ಬಂಗಾರ ಕಲಶವು ಜಾತ್ರೆ ಅಂಗವಾಗಿ 3 ದಿನ ಮಾತ್ರ ಭಕ್ತರ ದರ್ಶನಕ್ಕೆ ದೊರೆಯುವುದು. ಗುರುವಾರ ಬೆಳಗ್ಗೆ 10 ಗಂಟೆಗೆ ಬಾಗಲಕೋಟೆ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಕಳಸದ ಬಾಬುದಾರರು 72 ಗಂಟೆಯಲ್ಲಿ ಕಳಸವನ್ನು ಮರಳಿಸುತ್ತೆವೆ ಎಂಬ ಷರತ್ತುಬದ್ದ ಮುಚ್ಚಳಿಕೆ ಪತ್ರಕೊಟ್ಟು ಪೊಲೀಸ್ ಭದ್ರತೆಯಲ್ಲಿ ರಾತ್ರಿ ಹಳೆಮಲ್ಲಾಪೂರ, ಕಿರಸೂರ, ಭಗವತಿ, ಹಳ್ಳೂರ, ಬೇವೂರ ಮಾರ್ಗದ ಮೂಲಕ ಪಾದಯಾತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಕೂಡಲಸಂಗಮಕ್ಕೆ ಆಗಮಿಸಿತು.
47 ಕಿ.ಮೀ ದೂರದ ಮಾರ್ಗದುದ್ದಕ್ಕೂ ವಿವಿಧ ಗ್ರಾಮದ ಭಕ್ತರು ಕಲಶವನ್ನು ಸ್ವಾಗತಿಸಿ, ಪೂಜೆ, ಮೆರವಣಿಗೆ ಮಾಡಿ ಮುಂದಿನ ಗ್ರಾಮಕ್ಕೆ ಕಳುಹಿಸಿದರು. ಮಾರ್ಗದುದ್ದಕ್ಕೂ ಅನೇಕ ಭಕ್ತರು ಪ್ರಸಾದ, ತಂಪು ಪಾನಿಯ, ಹಣ್ಣುಗಳನ್ನು ವಿತರಿಸಿದರು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕೂಡಲಸಂಗಮಕ್ಕೆ ಆಗಮಿಸುತ್ತಿದ್ದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾ ತಂಡಗಳು ನೃತ್ಯ ಪ್ರದರ್ಶನ ಮಾಡುತ್ತ ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದರು. ಆರತಿಯೊಂದಿಗೆ ಸಂಗಮನಾಥನ ದೇವಾಲಯದಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕಿ ಸಂಗಮೇಶ್ವರ ದೇವಾಲಯದ ಮುಂದೆ ಪೂಜೆ ಸಲ್ಲಿಸಿ ದೇವಾಲಯದಿಂದ ಬಸವೇಶ್ವರ ವೃತ್ತದ ಮೂಲಕ ಗ್ರಾಮದ ಕಳಸದ ಕಟ್ಟೆಯವರೆಗೆ ಮೆರವಣಿಗೆ ಮಾಡಲಾಯಿತು. ನಂತರ ಗ್ರಾಮಸ್ಥರು ಕಳಸಕ್ಕೆ ದೀಡ್ ನಮಸ್ಕಾರ ಹಾಕಿದರು.