ಚನ್ನಪಟ್ಟಣ: ತಾಲೂಕಿನ ಪ್ರಸಿದ್ಧ ಗೌಡಗೆರೆ ಬಸವಪ್ಪ ಚಾಮುಂಡೇಶ್ವರಿ ಪುಣ್ಯಕ್ಷೇತ್ರಕ್ಕೆ ಭಾನುವಾರ ಭಕ್ತಸಾಗರ ಹರಿದುಬಂದಿತು.
ಕ್ಷೇತ್ರದಲ್ಲಿ ನೆಲೆನಿಂತಿರುವ ಅತಿಎತ್ತರದ ಶ್ರೀ ಚಾಮುಂಡೇಶ್ವರಿ ದೇವಿಯ ಪಂಚಲೋಹ ವಿಗ್ರಹ ಹಾಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ತಾಯಿಯ ಪವಾಡಗಳ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಸಾಕಷ್ಟು ಪ್ರಚಲಿತಕ್ಕೆ ಬಂದಿದ್ದು, ಆಷಾಡ ಮಾಸದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭಕ್ತಸಾಗರ ಹರಿದುಬರುತ್ತಿದೆ. ರಾಜ್ಯವಷ್ಟೇ ಅಲ್ಲದೇ ನೆರೆರಾಜ್ಯದ ಭಕ್ತರು ಸಹ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಮಂಗಳವಾರ, ಶುಕ್ರವಾರ, ಭಾನುವಾರ ಸೇರಿದಂತೆ ರಜಾದಿನಗಳಲ್ಲಿ ಕ್ಷೇತ್ರದಲ್ಲಿ ಕಾಲಿಡಲು ಸಹ ನೆಲೆ ಇಲ್ಲದಂತಾಗುತ್ತಿದೆ. ಭಾನುವಾರ ಕ್ಷೇತ್ರಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ಲಕ್ಷ ದಾಟಿದೆ.
ಸಹಕರಿಸುವಂತೆ ಮನವಿ!
ಆಷಾಡ ಮಾಸದ ಪ್ರಯುಕ್ತ ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲಾ ಭಕ್ತರಿಗೂ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಷಾಡ ಮಾಸ ಮುಗಿಯುವ ವರೆಗೆ ದಯಮಾಡಿ ವೃದ್ದರು, ಚಿಕ್ಕಮಕ್ಕಳನ್ನು ಹೊಂದಿರುವ ತಾಯಂದಿರು ಹಾಗೂ ಅನಾರೋಗ್ಯ ಪೀಡಿತರು ದಯಮಾಡಿ ಕ್ಷೇತ್ರಕ್ಕೆ ಆಗಮಿಸದಂತೆ ದೇವಾಲಯದ ಧರ್ಮಾಧಿಕಾರಿ ಡಾ.ಮಲ್ಲೇಶ್ ಗುರೂಜಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,
ತಾಲೂಕಿನ ಗೌಡಗೆರೆ ಗ್ರಾಮದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯಕ್ಕೆ ಆಷಾಡ ಮಾಸದ ಹಿನ್ನೆಲೆಯಲ್ಲಿ ಪ್ರತಿದಿನ ಸಾವಿರಾರು ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ದೇವಿಯ ದರ್ಶನ, ಬಸವಪ್ಪ ಆಶೀರ್ವಾದ, ತೀರ್ಥ ಸ್ನಾನ ಹಾಗೂ ಕಾಯಿ ಹಾಗೂ ಉಪ್ಪಿನ ಹರಕೆ ಹೊರಲು ಆಗಮಿಸುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದ್ದು, ಶುಕ್ರವಾರ, ಮಂಗಳವಾರ, ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಲ್ಲಿ ಈ ಸಂಖ್ಯೆ ಲಕ್ಷ ಸಮೀಪಿಸುತ್ತಿದೆ. ವಯೋವೃದ್ಧರು ಹಾಗೂ ಚಿಕ್ಕಮಕ್ಕಳಿಗೆ ಹೆಚ್ಚು ಭಕ್ತರು ಸೇರುವ ಕಾರಣ ಅನಾನುಕೂಲ ವಾಗುತ್ತಿದ್ದು, ಆಷಾಡ ಮಾಸ ಮುಗಿಯುವ ವರೆಗೆ ಕ್ಷೇತ್ರಕ್ಕೆ ಬಾರದಂತೆ ಧರ್ಮದರ್ಶಿಗಳು ಕಳಕಳಿಯ ಮನವಿ ಮಾಡಿದ್ದಾರೆ.
ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸವಲತ್ತುಗಳನ್ನು ಒದಗಿಸಲು ಕ್ಷೇತ್ರದ ವತಿಯಿಂದ ಶ್ರಮಿಸುತ್ತಿದ್ದೇವೆ. ನಿರಂತರವಾಗಿ ಅನ್ನದಾಸೋಹ ನಡೆಯುತ್ತಿದೆ. ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಳ್ಳುತ್ತಿರುವ ಕಾರಣ ದರ್ಶನ ವ್ಯವಸ್ಥೆಗೆ ಸಮಸ್ಯೆಯಾಗುತ್ತಿದೆ. ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚು ಅನಾನುಕೂಲ ಎದುರಿಸ ಬೇಕಾಗಿರುವ ಕಾರಣ ಈ ದಿನಗಳಲ್ಲಿ ಕ್ಷೇತ್ರಕ್ಕೆ ಆಗಮಿಸದಂತೆ ಮಲ್ಲೇಶ್ ಗುರೂಜೀ ಮನವಿ ಮಾಡಿಕೊಂಡಿದ್ದಾರೆ.