ಬೆಳಗಾವಿ: ಜಿಲ್ಲೆಯಲ್ಲಿ ಈವರೆಗೂ ಕರೊನಾ ವೈರಸ್ ಸೋಂಕು ಯಾರಲ್ಲಿಯೂ ಪತ್ತೆಯಾಗಿಲ್ಲ. ಆದರೂ ಜಿಲ್ಲಾಡಳಿತ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಇಲ್ಲಿನ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿದೆ.
ರಾಜ್ಯ ಹಾಗೂ ಹೊರರಾಜ್ಯಗಳಿಂದ ನಿತ್ಯವೂ ಸಾವಿರಾರು ಭಕ್ತರು ಬೆಳಗಾವಿ ಜಿಲ್ಲೆಯಲ್ಲಿರುವ ಶ್ರೀಕ್ಷೇತ್ರ ದರ್ಶನಕ್ಕೆ ಬರುತ್ತಾರೆ. ಹೀಗಾಗಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಹಲವು ದೇವಾಲಯ, ಮಸೀದಿ ಮತ್ತು ಗುರುದ್ವಾರಗಳ ಆಡಳಿತ ಮಂಡಳಿಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿಗಳು ಮೌಖಿಕವಾಗಿ ತಿಳಿಸಿದೆ. ಅಲ್ಲದೆ, ಸಂಬಂಧಪಟ್ಟ ಆಡಳಿತ ಮಂಡಳಿಗಳಿಗೆ ಪ್ರಕಟಣೆ ಹೊರಡಿಸುವಂತೆ ಸೂಚಿಸಿದ್ದಾರೆ.
ದಕ್ಷಿಣದ ಕಾಶಿ ಎಂದೇ ಹೆಸರಾದ ಬೆಳಗಾವಿ ಕಪಿಲೇಶ್ವರ, ಸವದತ್ತಿಯ ರೇಣುಕಾ ಯಲ್ಲಮ್ಮ, ರಾಮದುರ್ಗ ತಾಲೂಕಿನ ಗೊಡಚಿಯ ವೀರಭದ್ರೇಶ್ವರ ದೇವಸ್ಥಾನ, ರಾಯಬಾಗ ತಾಲೂಕು ಚಿಂಚಲಿಯ ಮಾಯಕ್ಕಾ ದೇವಸ್ಥಾನ ಮತ್ತು ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ದೇವಸ್ಥಾನ ಬಂದ್ ಇಲ್ಲ: ಬೆಳಗಾವಿಯ ದಂಡು ಮಂಡಳಿ ವ್ಯಾಪ್ತಿಯಲ್ಲಿನ ಹಿಂಡಲಗಾ ಗಣಪತಿ ಮಂದಿರ ಹಾಗೂ ಮಿಲಿಟರಿ ಮಹಾದೇವ ಮಂದಿರವನ್ನೂ ಭಾಗಶಃ ಬಂದ್ ಮಾಡಲಾಗಿದೆ. ಹೆಚ್ಚಿನ ಭಕ್ತರಿಗೆ ಮಂದಿರ ಪ್ರವೇಶಕ್ಕೆ ಮತ್ತು ಮಂದಿರದ ಆವರಣದಲ್ಲಿರಲು ಅವಕಾಶ ನೀಡುತ್ತಿಲ್ಲ. ಕೇವಲ ಸಾರ್ವಜನಿಕರ ಪ್ರವೇಶ ಮಾತ್ರ ನಿರ್ಬಂಧಿಸಲಾಗಿದ್ದು, ಯಾವುದೇ ದೇವಾಲಯವನ್ನು ಸಂಪೂರ್ಣವಾಗಿ ಬಂದ್ ಮಾಡಲು ಆದೇಶಿಸಿಲ್ಲ. ದೇವಸ್ಥಾನಗಳಲ್ಲಿ ಎಂದಿನಂತೆ ಅರ್ಚಕರು ದೇವರ ಮೂರ್ತಿಗೆ ಪೂಜೆ ಸಲ್ಲಿಸಬಹುದಾಗಿದೆ. ಗುರುದ್ವಾರಗಳಲ್ಲಿ ಆರಾಧನೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಆದಷ್ಟು ಕಡಿಮೆ ಸಂಖ್ಯೆಯ ಜನ ಪಾಲ್ಗೊಳ್ಳುವಂತೆ ಎಚ್ಚರ ವಹಿಸುವಂತೆ ತಿಳಿಸಲಾಗಿದೆ.
ಕರೊನಾ ವೈರಸ್ ಹರಡದಂತೆ ಅಗತ್ಯ ಮುಂಜಾಗ್ರತೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಹಳ ದೇವಸ್ಥಾನ ಹಾಗೂ ಮಸೀದಿಗಳಿರುವ ಕಾರಣ ಸ್ವಲ್ಪ ದಿನಗಳ ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತಿದೆ. ಆಯಾ ಆಡಳಿತ ಮಂಡಳಿಗಳಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಹೊರರಾಜ್ಯದ ಹಾಗೂ ಇತರೆ ಜಿಲ್ಲೆಗಳ ಭಕ್ತರ ಪ್ರವೇಶ ನಿರ್ಬಂಧಿಸುವಂತೆ ಪ್ರಕಟಣೆ ಹೊರಡಿಸಲು ತಿಳಿಸಲಾಗಿದೆ. ಎಂದಿನಂತೆ ಅರ್ಚಕರು ಪೂಜಾ ಕೈಂಕರ್ಯ ಮಾಡಬಹುದು.| ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ.