ಚಾಮರಾಜನಗರ: ಶ್ರಾವಣ ಮಾಸದ ಕಡೇ ಶನಿವಾರ ಯಳಂದೂರು ತಾಲೂಕಿನ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಬೆಳಗಿನಿಂದಲೇ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮನವರಿಗೆ ವಿವಿಧ ಅಭಿಷೇಕಗಳನ್ನು ಮಾಡಿ, ತುಳಸಿ ಸೇರಿದಂತೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಆ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಇದರಿಂದ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು. ಬೆಟ್ಟಕ್ಕೆ ಹೋಗಲು ಯಳಂದೂರು ಪಟ್ಟಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಟ್ಟದ ದೇವಸ್ಥಾನ, ಕಮರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬಂದರು. ರಥದ ಬೀದಿಯಲ್ಲಿ ಹೆಚ್ಚಿನ ವಾಹನಗಳು ನಿಲ್ಲಿಸಿರುವುದು ಕಂಡು ಬಂತು. ದೇಗುಲದ ಸಮೀಪವಿರುವ ಅನ್ನ ದಾಸೋಹದಲ್ಲಿ ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಮಹಿಳೆಯರ ಶಕ್ತಿ: ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಸೇರಿದಂತೆ ಇತರ ಜಿಲ್ಲೆಗಳಿಂದ ಸಾವಿರಾರು ಮಹಿಳಾ ಭಕ್ತರು ಆಗಮಿಸಿದ್ದರು. ಎಲ್ಲ ಬಸ್‌ಗಳು ತುಂಬಿ ತುಳುಕುತ್ತಿದ್ದವು. ದೇವರ ದರ್ಶನ ಪಡೆದ ಭಕ್ತರು, ನಂತರ ಗರುಡೋತ್ಸವ ಸೇರಿದಂತೆ ಇತರ ಸೇವೆ ಸಲ್ಲಿಸಿದರು. ದಾಸಂದಿರು ಕಡ್ಲೆಪುರಿ, ಬೆಲ್ಲ, ಅಕ್ಕಿ, ಸೇರಿದಂತೆ ಇತರ ದವಸಧಾನ್ಯಗಳೊಂದಿಗೆ ದೇಗುಲದ ಸುತ್ತ ಬ್ಯಾಟೆಮನೆ ಸೇವೆಯಲ್ಲಿ ತೊಡಗಿದ್ದರು.
ಶಾಸಕರಿಂದ ವಿಶೇಷ ಪೂಜೆ: ಕಡೇ ಶ್ರಾವಣ ಶನಿವಾರ ನಿಮಿತ್ತ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಬೆಂಬಲಿಗರು ಬೆಳಗಿನ ಜಾವದಲ್ಲಿ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡರು. ಅಭಿಷೇಕ, ಕುಂಕುಮ ಅರ್ಚನೆ ಸೇರಿದಂತೆ ಇತರ ಪೂಜಾ ಕೈಂಕರ್ಯ ನೆರವೇರಿದವು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಪ್ರಧಾನ ಕಾರ್ಯದರ್ಶಿ ಯರಿಯೂರು ಪ್ರಕಾಶ್, ಮುಖಂಡರಾದ ವೆಂಕಟೇಶ್, ಕೃಷ್ಣಪುರ ದೇವರಾಜು, ಕೇತಮ್ಮ , ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್. ಮೋಹನ್ ಕುಮಾರ್, ಸಿಬ್ಬಂದಿ ರಾಜು, ಶೇಷಾದ್ರಿ ಸೇರಿದಂತೆ ಇತರರು ಇದ್ದರು.