ಗುಂಡ್ಲುಪೇಟೆ: ಪಟ್ಟಣ ಹಾಗೂ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಶಿವಲಿಂಗಕ್ಕೆ ಭಸ್ಮಾಲಂಕಾರ ಮಾಡಿ ಜ್ಯೋತಿರ್ಭೀಮೇಶ್ವರ ಪೂಜೆ ನೆರವೇರಿಸಲಾಯಿತು. ಕಾಳಿಕಾಂಬಾ ಕಮಠೇಶ್ವರ ದೇವಾಲಯಲ್ಲಿ ವಿಶೇಷ ಪೂಜೆ ನಂತರ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು.
ತಾಲೂಕಿನ ಬೆರಟಹಳ್ಳಿ ಗ್ರಾಮದ ಅಕ್ಷಯ ಮಹದೇಶ್ವರ ದೇವಾಲಯ, ಇಂಗಲವಾಡಿ ಮಹದೇಶ್ವರ ದೇವಾಲಯ, ಮಲ್ಲಯ್ಯನಪುರ ಮತ್ತು ಕಬ್ಬಹಳ್ಳಿ ಸೇರಿದಂತೆ ಎಲ್ಲ ಗ್ರಾಮಗಳಲ್ಲಿರುವ ಮಹದೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ತಾಲೂಕಿನ ಕೋಡಹಳ್ಳಿ ಗ್ರಾಮದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಮಹದೇಶ್ವರಸ್ವಾಮಿ ಆರಾಧನೆ ಮತ್ತು 19ನೇ ವರ್ಷದ ವಿಶೇಷ ಪೂಜೆ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಗಳಿಂದ ನೆರವೇರಿತು. ದೇವಾಲಯಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು. ಗುರುವಾರ ಮುಂಜಾನೆ ಮಹದೇಶ್ವರಸ್ವಾಮಿಗೆ ದೇವಸ್ಥಾನದ ಪ್ರದಾನ ಅರ್ಚಕರು ರುದ್ರಾಭಿಷೇಕ ಮತ್ತು ವಿಭೂತಿ, ಬಿಲ್ವಪತ್ರೆ ಅಭಿಷೇಕ ನಡೆಸಿ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಿದರು.
ನೂಕು ನುಗ್ಗಲು: ಭೀಮನ ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರ ಸ್ವಾಮಿ ದರ್ಶನಕ್ಕೆ ತಾಲೂಕಿನ ಎಲ್ಲ ಗ್ರಾಮಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಏಕಕಾಲದಲ್ಲಿ ಆಗಮಿಸಿದ್ದರಿಂದ ಭಾರೀ ನೂಕುನುಗ್ಗಲು ಉಂಟಾಗಿತ್ತು. ವಾಹನಗಳು ಹಾಗೂ ಭಕ್ತರನ್ನು ನಿಯಂತ್ರಿಸಲು ಪಟ್ಟಣ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಆಯೋಜಿಸಿದ್ದರು.
ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಇಲ್ಲಿನ ಮಹದೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಬೆಲ್ಲದ ಪಾಯಸ, ಹಲಸಿನ ಕಾಯಿಯ ಹುಳಿ, ಅನ್ನ ಸಾರು ಪ್ರಸಾದವನ್ನು ವಿನಿಯೋಗ ಮಾಡಲಾಯಿತು,
ಕೊಂಗಳ್ಳಿ ಬೆಟ್ಟಕ್ಕೆ ಭಕ್ತರ ದಂಡು:
ನೆರೆಯ ತಮಿಳುನಾಡಿನ ತಾಳವಾಡಿ ಪಿರ್ಕಾಗೆ ಸೇರಿದ ಕೊಂಗಳ್ಳಿ ಮಲ್ಲಿಕಾರ್ಜುನ ತಾಲೂಕಿನ ಬಹುತೇಕ ಗ್ರಾಮಗಳ ಜನರ ಆರಾಧ್ಯದೈವವಾಗಿದೆ. ಈ ಹಿನ್ನೆಲೆಯಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ತಾಲೂಕಿನ ಎಲ್ಲ ಗ್ರಾಮಗಳ ಭಕ್ತರು ಬಸ್ಸು, ಬೈಕು ಕಾರು ಹಾಗೂ ಆಟೋಗಳಲ್ಲಿ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹೂವು ಹಣ್ಣು ಅರ್ಪಿಸಿ ಧೂಪ ಹಚ್ಚಿ ತಮ್ಮ ಕುಟುಂಬ ಹಾಗೂ ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯಕ್ಕೆ ಆಗಮಿಸಿದವರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.