ಜಿಲ್ಲೆ

ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತರ ದಂಡು

Mysuru - Desk - Ravikumar


ಚಾಮರಾಜನಗರ: ಕಡೇ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತರ ದಂಡು ಹರಿದು ಬಂದಿತು. ಇದರಿಂದ ಬಸ್‌ಗಳ ಕೊರತೆ ಉಂಟಾಗಿ ಪ್ರಯಾಣಿಕರು ಪರದಾಡಬೇಕಾಯಿತು.


ಕಡೇ ಶ್ರಾವಣ ಶನಿವಾರದ ಅಂಗವಾಗಿ ತಾಲೂಕಿನ ಬಹುತೇಕ ಗ್ರಾಮಗಳ ಭಕ್ತರು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದರು. ಶನಿವಾರ ಹಾಗೂ ಭಾನುವಾರ ವಾರದ ರಜೆಯ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಆಗಮಿಸಿದ್ದ ಪ್ರವಾಸಿಗರೂ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ರಾಜ್ಯದ ನಾನಾ ಮೂಲೆಗಳಿಂದಲೂ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ತಮ್ಮೊಂದಿಗೆ ಕುಟುಂಬದ ಸದಸ್ಯರೂ ಆಗಮಿಸುತ್ತಿರುವುದರಿಂದ ಬೆಟ್ಟಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.


ವಾರದ ಕೊನೆ ಎರಡು ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ನಿಯೋಜಿಸಿದ್ದರು. ಆದರೂ, ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಆಗಾಗ ಬೀಳುವ ಮಳೆ ಹಾಗೂ ಬಿಸಿಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದು ಬಸ್‌ನಲ್ಲಿ ಪ್ರಯಾಣಿಸಬೇಕಾಯಿತು.


ಶನಿವಾರ ಬೆಳಗ್ಗೆ ಸಾರಿಗೆ ಸಂಸ್ಥೆಯು ಬೆಟ್ಟಕ್ಕೆ 8 ಬಸ್‌ಗಳನ್ನು ನಿಯೋಜಿಸಿದ್ದರೂ ಬೆಳಗಿನಿಂದ ಮಧ್ಯಾಹ್ನದವರೆಗೂ ಪ್ರಯಾಣಿಕರ ಸಂಖ್ಯೆ ಏರುಗತಿಯಲ್ಲಿಯೇ ಇತ್ತು. ಇದರಿಂದ ಬಸ್ ಹತ್ತಲು ನೂಕು ನುಗ್ಗಲುಂಟಾಯಿತು. ಒಂದು ಕಿಲೋ ಮೀಟರ್‌ವರೆಗೂ ಭಕ್ತರು ಸಾಲಿನಲ್ಲಿ ನಿಂತು ಟಿಕೆಟ್ ಪಡೆದುಕೊಂಡರು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ಹೆಚ್ಚುವರಿಯಾಗಿ ಐದು ಬಸ್‌ಗಳನ್ನು ನಿಯೋಜಿಸಲಾಯಿತು.


ಕೋಟ್,
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಕಡೇ ಶ್ರಾವಣ ಶನಿವಾರದ ಅಂಗವಾಗಿ ಸಂಸ್ಥೆಯು ಹುಲಿಗೆನಮೊರಡಿ ವೆಂಕಟರಮಣಸ್ವಾಮಿ ಬೆಟ್ಟಕ್ಕೂ ಬಸ್ಸುಗಳನ್ನು ನಿಯೋಜಿಸಿ ದೇವಾಲಯಗಳಿಗೆ ಹೋಗುವ ಭಕ್ತರಿಗೆ ಅನುಕೂಲ ಮಾಡಿದೆ.
ತ್ಯಾಗರಾಜ್, ಸಾರಿಗೆ ಡಿಪೋ ಮ್ಯಾನೇಜರ್.