ಬೇಲೂರು: ಮಳೆಯಿಂದಾಗಿ ಕಳೆದ ಕೆಲ ದಿನಗಳಿಂದ ಬಿಕೋ ಎನ್ನುತ್ತಿದ್ದ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿದ್ದರಿಂದ ದೇಗುಲ ಜನಜಂಗುಳಿಯಿಂದ ತುಂಬಿತ್ತು.
ಎರಡು ದಿನಗಳ ರಜೆ ಹಾಗೂ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಇನ್ನೇನು ಶಾಲೆ-ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ಅಷ್ಟರೊಳಗೆ ದೇಗುಲಕ್ಕೆ ಬಂದು ಹೋಗುವುದಕ್ಕಾಗಿ ಸಾಕಷ್ಟು ಜನರು ಆಗಮಿಸಿದ್ದರು. ಸ್ಥಳೀಯವಾಗಿ ವಿವಾಹ, ಶುಭ ಸಮಾರಂಭಗಳಿಗೆ ಆಗಮಿಸಿದ್ದ ಸಾರ್ವಜನಿಕರು ದೇಗುಲಕ್ಕೆ ಆಗಮಿಸಿದ್ದರು. ದೇಗುಲದ ಒಳ ಮತ್ತು ಹೊರ ಆವರಣ ಪ್ರವಾಸಿಗರಿಂದ ಭರ್ತಿಯಾಗಿತ್ತು.
ದೇಗುಲಕ್ಕೆ ಆಗಮಿಸಿದ ಪ್ರವಾಸಿಗರಲ್ಲಿ ಸಾಕಷ್ಟು ಜನರು ಮಾರ್ಗದರ್ಶಿಗಳಿಂದ ಮಾಹಿತಿ ಪಡೆದರೆ ಮತ್ತೆ ಕೆಲವರು ದೇಗುಲದ ಶಿಲ್ಪ ಸೌಂದರ್ಯವನ್ನು ಕಣ್ತುಂಬಿಕೊಂಡರು. ದೇವಸ್ಥಾನದ ಹಿಂಭಾಗದ ವಾಹನಗಳ ನಿಲುಗಡೆ ಸ್ಥಳ ಭರ್ತಿಯಾಗಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ದೇಗುಲದ ಮುಂಭಾಗ ಮತ್ತು ಹಿಂಭಾಗದ ರಸ್ತೆಯ ಇಕ್ಕೆಲಗಳಲ್ಲೂ ನಿಲುಗಡೆ ಮಾಡಿದ್ದರು. ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು.