ಹುಳಿಯಾರು: ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಪುರದಮಠದ ಕೃತಿಕೋತ್ಸವ ಎಂದರೆ ಮುದ್ದೆ ಜಾತ್ರೆ ಎಂದೆ ಪ್ರಸಿದ್ಧಿ. ವರ್ಷಕ್ಕೊಮ್ಮೆ ನಡೆವ ಮುದ್ದೆ ದಾಸೋಹಕ್ಕೆ ಐದಾರು&ದಶಕಗಳ ಇತಿಹಾಸವಿದೆ. ಹಳ್ಳಿ, ಹಳ್ಳಿಗಳಿಂದ ಜನರು ಆಗಮಿಸಿ, ಬಡವ, ಬಲ್ಲಿದ ಶ್ರೀಮಂತ, ಮೇಲು ಕೀಳು ಎನ್ನುವ ಭೇದವಿಲ್ಲದೆ ಎಲ್ಲರೂ ಮುದ್ದೆ ಹುಳ್ಸೊಪು$್ಪ ಸವಿಯಲು ಮುಂದಾಗುತ್ತಾರೆ.
ಹೌದು....! ಪ್ರತಿ ವರ್ಷದಂತೆ ಈ ವರ್ಷವೂ ಪುರದಮಠದಲ್ಲಿ ಪುರಾಣ ಪ್ರಸಿದ್ಧ ಶ್ರೀಚನ್ನಬಸವೇಶ್ವರ ಸ್ವಾಮಿ ಕೃತಿಕಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಕೃತಿಕೋತ್ಸವದ ಮುದ್ದೆ ಊಟ ಈ ಭಾಗದಲ್ಲಿ ಹೆಚ್ಚು ಹೆಸರುವಾಸಿಯಾಗಿರುವಿದರಿಂದ, ಮುದ್ದೆ ಊಟ ಸವಿಯಲೆಂದೆ ಅನೇಕರು ಆಗಮಿಸಿ ಸಂಭ್ರಮಿಸುತ್ತಾರೆ.
ಸುತ್ತಳ್ಳಿಯಲ್ಲಿ ಮುದ್ದೆ ಜಾತ್ರೆಯೆಂದೇ ಪ್ರಸಿದ್ಧಿಯಾಗಿರುವುದರಿಂದ ಎರಡ್ಮೂರು ಕ್ವಿಂಟಾಲ್ ರಾಗಿ ಬಳಸಿ ಐದಾರು ಸಾವಿರ ಮುದ್ದೆ, ಏಳೆಂಟು ಕೊಳಗದಷ್ಟು ಸಾಂಬರ್ ತಯಾರಿಸುತ್ತಾರೆ. ಹದಿನೈದಿಪ್ಪತ್ತು ಕ್ವಿಂಟಾಲ್ ಅಕ್ಕಿ ಬಸಿಯುತ್ತಾರೆ. ಬಂದ ಭಕ್ತರಲ್ಲಿ ಯಾರೊಬ್ಬರೂ ಊಟವಿಲ್ಲದೆ ಹಿಂದಿರುಗದಂತೆ, ಹೊಟ್ಟೆ ತುಂಬ ಊಟ ಹಾಕುವಷ್ಟು ಅಡುಗೆ ಸಿದ್ಧವಾಗಿರುತ್ತದೆ. ಎಷ್ಟೇ ಜನ ಬಂದರೂ, ಎಷ್ಟೇ ನೂಕು ನುಗ್ಗಲಿದ್ದರೂ, ಕೋಪಗೊಳ್ಳದೆ ಪ್ರೀತಿಯಿಂದ ಊಟಕ್ಕಿಟ್ಟು ಕಳುಹಿಸುತ್ತಾರೆ.
ಒಟ್ಟಾರೆ ಧಾರ್ಮಿಕ ಸಮಾರಂಭದಲ್ಲಿ ಸುತ್ತಲೂ ಕಾಣಸಿಗದ ಮುದ್ದೆ ಊಟ ಪುರದಮಠದ ಕೃತಿಕೋತ್ಸವದಲ್ಲಿ ಸಿಗುವುದರಿಂದ ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬರುತ್ತದೆ. ಮುದ್ದೆ ಹುಳ್ಸೊಪು$್ಪಸಾರು ತಿಂದು ಧನ್ಯತಾಭಾವದಲ್ಲಿ ಭಕ್ತರು ಹಿಂದಿರುಗುತ್ತಾರೆ.
ಮುದ್ದೆ&ಸಾರೂ
ಎಲ್ಲ ರೀತಿಯ ತರಕಾರಿ, ಕಾಳು, ಕಾಯಿ ಹಾಕಿ ಮಾಡುವ ಸಾರೇ ಹುಳ್ಸೊಪು$್ಪ ಸಾರು. ಯಾರೊಬ್ಬರೂ ವೃತ್ತಿಪರ ಬಾಣಸಿಗರಲ್ಲದಿದ್ದರೂ, ಇವರು ಮಾಡುವ ಈ ಹುಳ್ಸೊಪ್ಪಿನ ರುಚಿಗೆ ಮನ ಸೋಲದವರೇ ಇಲ್ಲ. ರಾತ್ರಿ ಸರತಿ ಸಾಲಿನಲ್ಲಿ ನಿಂತು ಮನೆಗೂ ಸಾರನ್ನು ಕೊಂಡೊಯುತ್ತಾರೆ. ಕೆಲವರಂತೂ ಮುಂಜಾನೆ ಈ ಸಾರಿಗೆ ರೊಟ್ಟಿ, ಚಾಪಾತಿ ಮಾಡಿಸಿಕೊಂಡು ತಿನ್ನುತ್ತಾರೆ.
ಆರು ದಶಕದ ಇತಿಹಾಸ
ಕೃತಿಕೋತ್ಸವಕ್ಕೆ ಮುದ್ದೆ ಊಟ ನೀಡುವುದು ಕಳೆದ ಐದಾರು ದಶಕಗಳಿಂದಲೂ ನಡೆದುಕೊಂಡು ಬಂದ ಪ್ರತಿತಿ. ದೇವಸ್ಥಾನ ಸಮಿತಿಯಿಂದ ಕೃತಿಕೋತ್ಸವದ ದಿನ ಘೋಷಿಸಿದ ಮಾಹಿತಿ ದೊರೆತರೇ ಸಾಕು ಭಕ್ತರು ಸ್ವಯಂ ಪ್ರೇರಣೆಯಿಂದ ತಾವು ಬೆಳೆದ ದವಸ ಧಾನ್ಯ, ತರಕಾರಿ ಸೇರಿ ಇನ್ನಿತರ ವಸ್ತುಗಳನ್ನು ತಂದು ದೇವಸ್ಥಾನಕ್ಕೆ ನೀಡಿದರೇ, ಇನ್ನು ಕೆಲವರು ಅಕ್ಕಿ, ಬೇಳೆಕಾಳು, ರಾಗಿ, ಎಣ್ಣೆ ಸೇರಿ ಮುದ್ದೆ ಸಾರಿಗೆ ಬೇಕಾದ ಎಲ್ಲ ಪದಾರ್ಥಗಳನ್ನೂ ಕೊಂಡು ತಂದಿರುತ್ತಾರೆ. ಇದನ್ನೆಲ್ಲಾ ಉಪಯೋಗಿಸಿ ರಾಗಿಮುದ್ದೆ ಹಾಗೂ ಹುಳ್ಸೊಪು$್ಪ ತಯಾರಿಸಿರುತ್ತಾರೆ. ಆದರೆ ಈ ಅಡುಗೆ ತಯಾರಿಕೆಗೆ ಒಬ್ಬರಿಗೆ ಮೇಲುಸ್ತುವಾರಿ ನೀಡಿರುವುದಿಲ್ಲ. ಎಲ್ಲರೂ ತಮ್ಮ, ತಮ್ಮ ಜಾವಾಬ್ದಾರಿಯೆಂದು ಭಾವಿಸಿ ಸೇವೆ ಸಲ್ಲಿಸುತ್ತಾರೆ.