ತುಮಕೂರು: ಶ್ರೀ ಹನುಮ ಜಯಂತಿ ಅಂಗವಾಗಿ ನಗರದ ಎಲ್ಲ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ನಗರದ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಗೇಟ್ನಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಾಲಯ, ಆರ್ಟಿಒ ಮುಂಭಾಗದಲ್ಲಿರುವ ವರಪ್ರಸಾದ ವೀರಾಂಜನೇಯ ಸ್ವಾಮಿ ದೇಗುಲ, ಶ್ರೀರಾಮನಗರದ ಕಿಕ್ಕೇರಿ ಆಂಜನೇಯಸ್ವಾಮಿ ದೇವಾಲಯ, ಬಟವಾಡಿ ಸಮೀಪದ ಭಕ್ತಾಂಜನೇಯ ಸ್ವಾಮಿ ದೇವಾಲಯ, ವಿದ್ಯಾನಗರದ ಪುಟ್ಟಾಂಜನೇಯ ಸ್ವಾಮಿ ದೇವಸ್ಥಾನ, ಹನುಂತಪುರದ ಬಯಲಾಂಜನೇಯಸ್ವಾಮಿ ದೇವಾಲಯ, ಬನಶಂಕರಿಯ ಮಾರುತಿ ದೇವಾಲಯ, ಮೆಳೇಕೋಟೆಯ ಅಭಯ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಹನುಮ ನಾಮ ಸ್ಮರಣೆ, ವೇದ ಘೋಷಗಳು, ಭಜನೆಗಳು ಮೊಳಗಿದವು.
ಹನುಮ ಜಯಂತಿ ಪ್ರಯುಕ್ತ ಕೋಟೆ ಶ್ರೀಆಂಜನೇಯ ಸ್ವಾಮಿ ವೃತ್ತ, ಟೌನ್ ಹಾಲ್ ವೃತ್ತ, ಕಾಲ್ಟ್ಟ್ಯಾಕ್ಸ್, ಎಂ.ಜಿ. ರಸ್ತೆ, ಬಾರ್ಲೈನ್ ರಸ್ತೆ, ಎಸ್.ಎಸ್. ಪುರಂ ರಸ್ತೆ ಸೇರಿದಂತೆ ಜಿಲ್ಲೆ ಯಾದ್ಯಂತ ಪಟ್ಟಣ ಗಳು, ಹೋಬಳಿ ಕೇಂದ್ರಗಳು ಕೇಸರಿ ಧ್ವಜಗಳಿಂದ ಕಂಗೊಳಿಸುತ್ತಿದ್ದು, ಕೋಟೆ ಶ್ರೀ ಆಂಜನೇಯಸ್ವಾಮಿ ಯುವಕರ ಬಳಗ ಹನುಮ ಜಯಂತಿ ಪ್ರಯುಕ್ತ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಸರು ಬೇಳೆ, ಪಾನಕ, ಮಜ್ಜಿಗೆ ಪ್ರಸಾದವಾಗಿ ವಿನಿಯೋಗಿಸಿತು.
ಹನುಮ ಜಯಂತಿ ಅಂಗವಾಗಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಹೋಮ ಹವನ, ಭಜನಾ ಕಾರ್ಯ ಕ್ರಮಗಳು ನಡೆದಿದ್ದು, ಆಂಜನೇಯ ಸ್ವಾಮಿ ವಿಗ್ರಹ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಪುರಾತನ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ವಿಶೇಷತೆ ಎಂದರೆ ಗರ್ಭಗುಡಿಯ ಒಳಗೆ ಹನುಮನ ಎರಡು ಮೂರ್ತಿಗಳಿವೆ. ಈ ಪೈಕಿ ಒಂದು ಮೂರ್ತಿ ಪುರಾತನ ಕಾಲದ್ದಾಗಿದ್ದು, ಇನ್ನೊಂದು ಆ ಬಳಿಕ ಸ್ಥಾಪನೆ ಮಾಡಿದ ಮೂರ್ತಿಯಾಗಿದೆ. ಬೆಳಗ್ಗೆಯಿಂದಲೇ ಭಕ್ತಾದಿಗಳು ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪಂಚಾಮೃತ ಅಭಿಷೇಕ, ಮಂಗಳಾರತಿ, ಪ್ರಾಕಾರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ವಿಶೇಷವಾಗಿ ಸಿದ್ಧಪಡಿಸಿ ಬಗೆ ಬಗೆಯ ಹೂವುಗಳಿಂದ ಅಲಂಕರಿಸಿದ್ದ ಮಂಟರದಲ್ಲಿ ಕೋಟೆ ಆಂಜನೇಯಸ್ವಾಮಿಯ ಉತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹನುಮನ ದೇವಾಲಯಗಳಲ್ಲಿ ಶ್ರೀರಾಮ ನಾಮಜಪ ಹಾಗೂ ಹನುಮ ನಾಮ ಸ್ಮರಣೆಗಳು ಭಕ್ತರಿಂದ ಮೊಳಗಿದವು.
ಮೆಳೇಕೋಟೆಯ ಶ್ರೀಅಭಯಾಂಜನೇಯ ಸ್ವಾಮಿಗೆ ಸುಪ್ರಭಾತ ಸೇವೆಯೊಂದಿಗೆ ಆರಂಭವಾದ ಧಾರ್ಮಿಕ ಕೈಂಕರ್ಯಗಳಲ್ಲಿ ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಅಲಂಕಾರದೊಂದಿಗೆ ಮಹಾಮಂಗಳಾರತಿ ನಡೆಯಿತು. ನಗರದ ವಿವಿಧೆಡೆ ಹನುಮನ ದೇವಾಲಯಗಳಲ್ಲಿ ಬೆಳಗ್ಗೆಯಿಂದ ಪೂಜಾ ವಿಧಿವಿಧಾನಗಳು ನೆರವೇರಿದ್ದು, ಭಕ್ತಾದಿಗಳು ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು.