ಸೊರಬ ತಾಲೂಕಿನ ಹಾಲಗಳಲೆಯಲ್ಲಿ ನಾಗದೇವರಿಗೆ ಭಕ್ತರು ಹಾಲೆರೆದರು 
ಜಿಲ್ಲೆ

ಮಳೆ ಸುರಿಸು ಎಂದು ಬೇಡಿದ ಭಕ್ತರು

Shivamogga - Desk - Praveena Kumar S

ಸೊರಬ: ಸುಡು ಬಿಸಿಲಿನ ಮಧ್ಯೆ ನಾಗರ ಪಂಚಮಿ ಹಬ್ಬವನ್ನು ಸಂಭ್ರಮ ಆಚರಿಸಲಾಯಿತು. ಶ್ರಾವಣ ಮಾಸ ಎಂದರೆ ಮಲೆನಾಡಿನ ಎಲ್ಲೆಡೆ ಮಳೆ ಮತ್ತು ಶ್ರಾವಣದ ಮೊದಲ ವಾರದಲ್ಲಿ ಬರುವ ನಾಗರ ಪಂಚಮಿಯಲ್ಲಿ ಜಿಟಿಜಿಟಿ ಮಳೆ. ಮಳೆಯ ನಡುವೆ ಛತ್ರಿ ಹಿಡಿದು ನಾಗ ದೇವರ ಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರಾಕೃತಿಕ ವೈಫಲ್ಯದಿಂದ ಮಳೆ ಇಲ್ಲ. ಭವಿಷ್ಯದ ಗತಿ ಏನು ಎಂದು ಆತಂಕ ಪಡುತ್ತಿರುವ ಈ ದಿನದಲ್ಲಿ ನಾಗರಪಂಚಮಿ ಹಬ್ಬ ಸಾರ್ವಜನಿಕರಲ್ಲಿ ಕಳೆಗುಂದಿದ್ದು ಸಂಭ್ರಮಕ್ಕೆ ಕಾರ್ಮೋಡ ಕವಿದಂತೆ ಇತ್ತು. ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಗ್ರಾಮೀಣ, ನಗರ ಪ್ರದೇಶದಲ್ಲಿ ಭಕ್ತರು ಸಮೀಪದ ನಾಗ ದೇವಾಲಯಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನೂ ಕೆಲವರು ತಮ್ಮ ಗ್ರಾಮದಲ್ಲಿ ಇರುವ ನಾಗರ ಕಲ್ಲುಗಳಿಗೆ ಹೂತ್ತದ ಮಣ್ಣನ್ನು ತಂದು ಮನೆಯಲ್ಲಿಟ್ಟು ಪೂಜೆ ಸಲ್ಲಿಸಿ ಹಾಲೆರೆದು ನಾಗ ದೇವರಿಗೆ ಭಕ್ತಿ ಸರ್ಮಪಿಸಿದರು. ಹಬ್ಬದ ವಿಶೇಷವಾಗಿ ಮನೆಗಳಲ್ಲಿ ಉಂಡೆ, ಕಾಯಿ ಕಡುಬು, ಕಳಲೆ ಕಡುಬು, ಹೋಳಿಗೆ ಸೇರಿದಂತೆ ವಿಶೇಷ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಎಲ್ಲೆಡೆ ಭಕ್ತರು ದೇವರಲ್ಲಿ ಮಳೆ ಸುರಿಸು ಎಂದು ಬೇಡಿಕೊಳ್ಳುವುದು ಸಾಮನ್ಯವಾಗಿತ್ತು.