ಜಿಲ್ಲೆ

ಏಳು ಕೋಟಿಗೇಳು ಕೋಟಿಘೇ....

Yadgir

ಯಾದಗಿರಿ: ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಮಕರ ಸಂಕ್ರಮಣ ದಿನ ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿಯಿಂದ ನಡೆಯಿತು.
 

ಎಲ್ಲೆಲ್ಲೂ ಭಂಡಾರದ ಧೂಳು, ಕಣ್ಣು ಹಾಯಿಸಿದಲ್ಲೆಲ್ಲ ಜನಸಾಗರ, ಬೆಂಡು, ಬತ್ತಾಸಿನ ಭರ್ಜರಿ ಮಾರಾಟ, ಬೆಲ್ಲದ ಜಿಲೇಬಿ, ಬಿಸಿಬಿಸಿ ಭಜ್ಜಿಯ ಘಮಘಮ ವಾಸನೆ, ಪಲ್ಲಕ್ಕಿಯನ್ನು ಹೊತ್ತ ಪೂಜಾರಿಗಳು. ಇವು ಮೈಲಾಪುರದಲ್ಲಿ ಕಂಡು ಬಂದ ದೃಶ್ಯಗಳು.

ಎಲ್ಲ ಜಾತ್ರೆಗಳಂತೆ ಈ ಜಾತ್ರೆಯಲ್ಲಿ ರಥೋತ್ಸವ ಜರುಗುವುದಿಲ್ಲ. ಬದಲಿಗೆ ಕಬ್ಬಿಣದ ಸರಪಳಿ ಹರಿಯುವುದು ವಿಶೇಷ. ಮೈಲಾರಲಿಂಗೇಶ್ವರ ಹಲವು ವೈಶಿಷ್ಟೃದ ಗುಹಾಂತರ ದೇವಾಲಯವಾಗಿದ್ದು, ಜಾತ್ರೆಗೆ ಕಲ್ಯಾಣ ಕನರ್ಾಟಕ, ಉತ್ತರ ಕನರ್ಾಟಕ ಸೇರಿ ನೆರೆ ತೆಲಂಗಾಣ, ಆಂಧ್ರ, ಮಹಾರಾಷ್ಟ್ರಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಮಲ್ಲಯ್ಯನ ದರ್ಶನ ಪಡೆದು ಪುನೀತರಾದರು.

ಎಲ್ಲಿ ನೋಡಿದರೂ ಭಂಡಾರ, ಭಕ್ತಿ ಪರವಶದಲ್ಲಿ ಮೈಮರೆತ ಜನತೆ. ಕಿವಿಗಡಚಿಕ್ಕುವಂಥ ಕೂಗು ಮೈಲಾರಲಿಂಗ ಏಳು ಕೋಟಿಘೇ, ಮಧ್ಯಾಹ್ನ ಮಲ್ಲಯ್ಯನ ಗರ್ಭ ಗುಡಿಯಿಂದ ಉತ್ಸವ ಮೂತರ್ಿ ಗಂಗಾಸ್ನಾನಕ್ಕೆ ಪಕ್ಕದ ಹೊನ್ನಕೆರೆಗೆ ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಲ ವಾದ್ಯಗಳೊಂದಿಗೆ ಸಾಗಿತು.
ಈ ವೇಳೆ ಭಕ್ತರು `ಏಳು ಕೋಟಿಘೆ.. ಏಳು ಕೋಟಿಗೆ.. ಎಂಬ ಜಯಘೋಷದೊಂದಿಗೆ ಮಲ್ಲಯ್ಯನಿಗೆ ಪ್ರಿಯವಾದ ಭಂಡಾರ, ಕಲ್ಲುಸಕ್ಕರೆ, ಉತ್ತತ್ತಿ, ಕುರಿ ಉಣ್ಣೆ, ರೊಕ್ಕ ರೂಪಾಯಿ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು, ಜೋಳ, ಭತ್ತದ ಬೆಳೆಯನ್ನು ಎಸೆದು ಏಳು ಕೋಟಿಗೆ ಮಲ್ಲಯ್ಯ ಎನ್ನುತ್ತ ಭಕ್ತಿ ಭಾವ ಮೆರೆದರು.

ಗರ್ಭ ಗುಡಿಯಿಂದ ಹೊನ್ನಯ್ಯನ ಕೆರೆಗೆ ಉತ್ಸವ ಮೂತರ್ಿ ತೆರಳುವ ಸಮಯದಲ್ಲಿ ಪುರಾತನ ಸಂಪ್ರದಾಯದಂತೆ ಜೀವಂತ ಕುರಿಮರಿಗಳನ್ನು ಪಲ್ಲಕ್ಕಿ ಮೇಲೆ ಎಸೆಯುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದರೂ ಕಣ್ತಪ್ಪಿಸಿ ಭಕ್ತರು ಒಂದೆರಡು ಕುರಿಮರಿಗಳನ್ನು ಪಲ್ಲಕ್ಕಿ ಮೇಲೆ ಹಾರಿಸಿದರು. ಬಹುತೇಕರು ತಂದಿದ್ದ ಹರಕೆ ಕುರಿ ಮರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಮಾತ್ರವಲ್ಲ, ಭಕ್ತರಿಗೆ ಅರಿವು ಮೂಡಿಸುವ ಕೆಲಸವೂ ನಡೆಯಿತು. ಅಲ್ಲಲ್ಲಿ ಕುರಿ ಹಾರಿಸುವುದು ನಿಷೇಧ ಎಂಬ ನಾಮಲಕಗಳನ್ನು ಹಾಕಿ ಧ್ವನಿ ವರ್ಧಕದಲ್ಲೂ ಹೇಳಲಾಯಿತು.

ಸರಪಳಿ ಕಡಿತ: ಗಂಗಾಸ್ನಾನ ಮಾಡಿ ಪಲ್ಲಕ್ಕಿ ಹಿಂತಿರುಗಿದ ಬಳಿಕ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ಜರಗಿತು. ರೋಮಾಂಚನದ ಈ ದೃಶ್ಯಕ್ಕೆ ಲಕ್ಷಾಂತರ ಭಕ್ತವರ್ಗ ಸಾಕ್ಷಿಯಾಯಿತು. ಮುನ್ನೆಚ್ಚರಿಕೆಯಾಗಿ ಒಂದು ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ನಿಯೋಜಿಸುವ ಮೂಲಕ ಬಿಗಿಭದ್ರತೆ ಒದಗಿಸಲಾಗಿತ್ತು. ವೈದ್ಯಕೀಯ, ಸಾರಿಗೆ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಜಾತ್ರೋತ್ಸವ ಸುಸೂತ್ರ ಮತ್ತು ಯಶಸ್ವಿಯಾಗಿ ಜರುಗಿತು.
ಜನತೆ ಹೆಚ್ಚಿನ ಸಂಖ್ಯೆಯ ಅಂಗಡಿಗಳಲ್ಲಿದ್ದ ಸಿಹಿ ತಿಂಡಿ ತಿನಿಸು ಹಾಗೂ ಮಲ್ಲಯ್ಯನ ಭಂಡಾರ ಖರೀದಿಸಿದರು. ಚಿಕ್ಕಮಕ್ಕಳು ಆಟಿಕೆ ವಸ್ತುಗಳನ್ನು ಖರೀದಿಸಿ ಪೀಪಿ ಊದುತ್ತ, ಜೋಕಾಲಿಗಳಲ್ಲಿ ಕುಳಿತು ಸಂಭ್ರಮಿಸಿರುವುದು ಹೆಚ್ಚಿನ ಮೆರಗು ತಂದಿತು.