ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ರೈತರ ಕುಂದುಕೊರತೆ ಆಲಿಸಲು ತಹಸೀಲ್ದಾರ್ ನೇತೃತ್ವದಲ್ಲಿ ಕರೆದಿದ್ದ ಸಭೆ ಯಾವುದೇ ಮುನ್ಸೂಚನೆ ಇಲ್ಲದೆ ರದ್ದಾದ ಕಾರಣ ಆಕ್ರೋಶಗೊಂಡ ರೈತ ಮುಖಂಡರು ತಾಪಂ ಸಭಾಂಗಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು. ವಿಷಯ ತಿಳಿದ ತಹಸೀಲ್ದಾರ್ ಶಿವರಾಜ್ ಸ್ಥಳಕ್ಕೆ ಆಗಮಿಸಿ ರೈತ ಮುಖಂಡರ ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ನಿಗದಿಯಾಗಿದ್ದ ಸಭೆಗೆ ಹಲವು ರೈತರು ಆಗಮಿಸಿದ್ದರು. ಸುಮಾರು ಮೂರು ಗಂಟೆ ಕಾದರೂ ತಹಸೀಲ್ದಾರ್ ಸೇರಿ ಯಾವುದೇ ಅಧಿಕಾರಿಗಳು ದರ್ಶನ ಕೊಡಲಿಲ್ಲ. ಇದರಿಂದ ಕೆರಳಿದ ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಸಭೆ ರದ್ದುಗೊಳಿಸಿದ್ದು ಅಕ್ಷಮ್ಯ: ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ರೈತರ ಕೆಲಸ ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಾರೆ. ಹಣ ನೀಡಿದವರಿಗೆ ನೀಡಿದವರಿಗೆ ಕೆಲಸ ಮಾಡಿಕೊಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ತಹಸೀಲ್ದಾರ್ ನೇತೃತ್ವದ ಸಭೆಯಲ್ಲಿ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಿಕೊಳ್ಳುವ ಭರವಸೆಯಲ್ಲಿ ಕಾದು ಕುಳಿತಿದ್ದರೆ ಸಭೆಯನ್ನೇ ರದ್ದುಗೊಳಿಸಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಗಾರೆ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಹಲವು ಸಮಸ್ಯೆಗಳ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸುವಂತೆ ತಹಸೀಲ್ದಾರ್ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಬುಧವಾರ ಬೆಳಗ್ಗೆ 11ಕ್ಕೆ ಸಮಯ ನಿಗದಿ ಮಾಡಲಾಗಿತ್ತು. ಮಳೆಗಾಲವಿದ್ದರೂ ರೈತರು ಎಲ್ಲ ಕೆಲಸಗಳನ್ನು ಬಿಟ್ಟು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದರೂ ಅಧಿಕಾರಿಗಳು ಸಭೆ ರದ್ದುಗೊಳಿಸಿರುವುದು ಅಕ್ಷಮ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಗೊಂದಲಕ್ಕೆ ಕ್ಷಮೆ ಇರಲಿ: ತುರ್ತು ಕರ್ತವ್ಯದ ಹಿನ್ನೆಲೆಯಲ್ಲಿ ಸಭೆಗೆ ಬರಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಲಿಖಿತವಾಗಿ ತಿಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೆ. ಆದರೆ ಅವರು ಸರಿಯಾದ ವೇಳೆಗೆ ನಿಮಗೆ ಮಾಹಿತಿ ನೀಡದ ಕಾರಣ ಗೊಂದಲವಾಗಿದೆ. ಇದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ತಹಸೀಲ್ದಾರ್ ಶಿವರಾಜ್ ರೈತ ಮುಖಂಡರ ಮನವೊಲಿಸಿದರು.