ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಚನ್ನರಾಯಪಟ್ಟಣ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಸಿಎಂ ಮನೆಗೆ ದೇವನಹಳ್ಳಿಯಿಂದ ಹಮ್ಮಿಕೊಂಡಿದ್ದ ಜಾಥಾವನ್ನು ಹತ್ತಿಕ್ಕಲು ಪೊಲೀಸರು ಹರಸಾಹಸ ನಡೆಸಿದರು. ಬೆಂಗಳೂರಿನ ಕಡೆಗೆ ತೆರಳು ಮುಂದಾದ ಹೋರಾಟಗಾರರನ್ನು ಬ್ಯಾರಿಕೇಡ್ ಹಾಕಿ ತಡೆದ ಪೊಲೀಸರು ವಶಕ್ಕೆ ಪಡೆದು ಪೂರ್ವನಿಯೋಜನೆಯಂತೆ ಸಿದ್ದಗೊಳಿಸಿದ್ದ ಬಸ್‌ಗಳಲ್ಲಿ ಕುಳ್ಳರಿಸಿ ಪ್ರತಿಭಟನಾ ಸ್ಥಳದಿಂದ ದೂರಕ್ಕೆ ಕರೆದೊಯ್ದರು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ಜಟಾಪಟಿ ನಡೆಯಿತು. ಪೊಲೀಸರ ಎಳೆದಾಟದಲ್ಲಿ ಕೆಲವು ರೈತರಿಗೆ ಗಾಯಗಳಾದವು.
ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಆರ್ ಪಾಟೀಲ್ ಬಂಧಿತ ರೈತರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿದರು. ಬಳಿಕ ಸಭೆ ನಡೆಸಿ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರು. ನಿಮ್ಮ ಹೋರಾಟ ಬೆಂಬಲಿಸುತ್ತೇನೆ, ನಿಮ್ಮನ್ನು ಭೇಟಿಯಾಗಲು ಮುಖ್ಯಮಂತ್ರಿಗಳಿಗೆ ತಿಳಿಸಿ ಬಂದಿದ್ದೇನೆ, ಅಧಿವೇಶನ ಮುಗಿದ ಬಳಿಕ ನಿಮ್ಮ ನಿಯೊಗವನ್ನು ಭೇಟಿ ಮಾಡಿಸುತ್ತೇನೆ ಎಂದರು, ಇದಕ್ಕೆ ಒಪ್ಪದ ಹೋರಾಟಗಾರರು ಇಂದೇ ಭೇಟಿ ಮಾಡಬೇಕು ಎಂದು ಪಟ್ಟು ಹಿಡಿದರು. ಪರಿಸ್ಥಿತಿ ತಿಳಿಗೊಳಿಸಲು ಮತ್ತೆ ಪೊಲೀಸರು ಹೋರಾಟಗಾರರನ್ನು ಬಸ್‌ಗಳ ಮೂಲಕ ದೂರಕ್ಕೆ ಕರೆದೊಯ್ದರು.
ಯಾವ ನ್ಯಾಯ? ರೈತರು ಹೋರಾಟ ಪ್ರಾರಂಭ ಮಾಡಿ ನೂರಾರು ದಿನಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಹಳ್ಳಿಗಳಿಗೆ ಕೊನೆಯ ನೊಟೀಸ್ ಕೊಟ್ಟಿರುವುದು ಯಾವ ನ್ಯಾಯ ಎಂದು ರೈತ ಸಂಘದ ಮಹಿಳಾ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಚನ್ನರಾಯಪಟ್ಟಣದ ರೈತರ ಕೂಗು ಸಿದ್ದರಾಮಯ್ಯರಿಗೆ ಕೇಳಿಸಲಿಲ್ಲವೋ ಎಂದು ಅವರ ಮನೆಗೆ ಜಾಥಾ ಹೊರಟಿದ್ದೆವು, ರೈತರೇನು ದರೋಡೆ ಮಾಡಿದ್ದಾರೆಯೇ, ನಿಜಕ್ಕೂ ರಾಜ್ಯದಲ್ಲಿ ಸರ್ಕಾರವಿದೆಯೋ-ಇಲ್ಲವೋ, ಆಭಿವೃದ್ಧಿ ಹೆಸರಿನಲ್ಲಿ ಹೂವು, ಹಣ್ಣು ತರಕಾರಿ ಬೆಳೆಯುವ ರೈತರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದರು.
ಸಿದ್ದರಾಮಯ್ಯ ವಿರುದ್ಧ ಕಿಡಿ: ಹಿಂದಿನ ಸರ್ಕಾರದ ಅವಧಿಯಲ್ಲಿ, ಚನ್ನರಾಯಪಟ್ಟಣದ ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಯುತ್ತಿದ್ದಾಗ ಅಲ್ಲಿಯೇ ಬಂದಿದ್ದ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದರೇ ಭೂ ಸ್ವಾಧೀನ ಕೈಬಿಡುತ್ತೇವೆ ಎಂದಿದ್ದರು. ಆದರೆ ಅವರು ಅಧಿಕಾರಕ್ಕೆ ಬಂದು 10 ತಿಂಗಳಾದರೂ ಇದುವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು. ಕನಿಷ್ಠ ನಮ್ಮ ಭೇಟಿಗೂ ಅವಕಾಸ ನೀಡದೇ ಪೋಲಿಸರ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಇನ್ನಾದರು ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ ಎಂದು ತಿಳಿಸಿದರು. ಚುಕ್ಕಿ ನಂಜುಂಡಸ್ವಾಮಿ, ವಕೀಲರ ಸಂಘದ ರಾಜ್ಯಾಧ್ಯಕ್ಷ ಹರೀಂದ್ರ, ತಾಲೂಕು ಅಧ್ಯಕ್ಷ ಮುನಿರಾಜು, ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಆಂಜನೇಯರೆಡ್ಡಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಡಾ. ಕೆ.ವಿನೋದಕುಮಾರಗೌಡ, ರಾಜ್ಯಾಧ್ಯಕ್ಷ ಹರಳಾಪುರ ಮಂಜೇಗೌಡ ಮತ್ತಿತರರಿದ್ದರು.