ಜಿಲ್ಲೆ

ದೇಶ ಪ್ರೇಮಿಗಳ ಪುಸ್ತಕ ಪರಿಚಯವಾಗಲಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ದೇಶ ಪ್ರೇಮ ಬಿಂಬಿಸುವ ಸ್ವಾತಂತ್ರ್ಯ ಹೊರಾಟಗಾರರ ಜೀವನ ಚರಿತ್ರೆಗಳಿಗೆ ಸಂಬಂಧಿಸಿದ ಪುಸ್ತಕಗಳಿಗೆ ಗ್ರಂಥಾಲಯದಲ್ಲಿ ಮೊದಲ ಆದ್ಯತೆ ನೀಡಬೇಕು. ಆ ಮೂಲಕ ಮುಂದಿನ ಯುವ ಪೀಳಿಗೆಗೆ ಹೋರಾಟಗಾರರನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲೂಕಿನ ಕನ್ನಮಮಗಲ ಗ್ರಾಪಂ ಆವರಣದಲ್ಲಿ ನೂತನವಾಗಿ 57 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡ ಉದ್ಘಾಟನೆ ಮತ್ತು ಗೃಹಲಕ್ಷ್ಮೀ ಲಾನುಭವಿಗಳಿಗೆ ನೋಂದಣಿ ಪತ್ರ ವಿತರಿಸಿ ಮಾತನಾಡಿದರು.
ಜಾತ್ಯತೀತ ರಾಷ್ಟ್ರದಲ್ಲಿ ಸರ್ವಧರ್ಮ ಸಂಸ್ಕೃತಿ, ಸಮನ್ವಯತೆ ಸಾರುವ ವಿಚಾರಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಅಂಥ ಪುಸ್ತಕಗಳ ಲಭ್ಯತೆ ಗ್ರಂಥಾಲಯಗಳಲ್ಲಿ ಇಡಬೇಕು ಎಂದರು.
ಬಿಜೆಪಿ ನಾಯಕರೂ, ಅಜಾತಶತೃ ಅಟಲ್‌ಬಿಹಾರಿ ವಾಜಪೇಯಿ ಆರ್‌ಎಸ್‌ಎಸ್ ಹಿನ್ನೆಲೆವುಳ್ಳವರಾಗಿದ್ದರೂ ಮಹಾಮಾನವತಾವಾದಿಯಾಗಿದ್ದರು. ಅವರೊಟ್ಟಿಗೆ ಸಂಸದನಾಗಿ 15 ವರ್ಷ ಕೆಲಸ ಮಾಡಿದ್ದೇನೆ. ಪಕ್ಷ ಯಾವುದೇ ಇದ್ದರೂ ಅವರಿಂದ ಸಾಕಷ್ಟು ವಿಷಯ ಕಲಿತಿದ್ದೇನೆ. ಬಾಬರಿ ಮಸೀದಿ ನೆಲಸಮವಾದಾಗ ವಿಶ್ವದ ಮುಂದೆ ನಾವು ತಲೆ ತಗ್ಗಿಸುವಂತಾಗಿದೆ ಎಂದು ವಾಜಪೇಯಿ ಅವರು ನೊಂದು ನುಡಿದಿದ್ದರು. ನೆಹರು, ವಾಜಪೇಯಿ ಅವರಂಥ ನಾಯಕರ ಅಗತ್ಯದೇಶಕ್ಕಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕ ಇರಲಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಡಿಜಿಟಲ್ ಗ್ರಂಥಾಲಯ ಕಟ್ಟಡ ಇದಾಗಿದೆ. ಇದು ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿ. ಮಹಾತ್ಮಗಾಂಧಿ, ಜವಾಹರಲಾಲ್ ನೆಹರು, ಡಾ. ಅಂಬೇಡ್ಕರ್, ಬಾಬು ಜಗಜೀವನರಾಮ್, ಲಾಲ್‌ಬಹದ್ದೂರ್ ಶಾಸ್ತ್ರಿ ಹೀಗೆ ಮುಂತಾದವರು ಈ ದೇಶಕ್ಕಾಗಿ ಹೋರಾಡಿದ ಬಗ್ಗೆ ಪುಸ್ತಕಗಳ ಮೂಲಕ ಪರಿಚಯಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ಅದಕ್ಕೆ ಕಾರಣಕರ್ತರು ಯಾರು? ಹೋರಾಟ, ಬಂಧನ ಸೇರಿ ಅನೇಕ ವಿಷಯಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸದೇ ಹೋದರೆ ದೇಶಕ್ಕೆ ಮಾಡಿದ ದ್ರೋಹವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.