ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಇತ್ತೀಚೆಗೆ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ನಿಂದ ಇಂಡಿಗೋ (6ಇ 6744) ವಿಮಾನದಲ್ಲಿ ಬಂದ ಚೆನ್ನೈ ಮೂಲದ ವ್ಯಕ್ತಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ ಬರೋಬ್ಬರಿ 4 ಕೋಟಿ ರೂ. ಮೌಲ್ಯದ 6.5 ಕೆಜಿ ತೂಕದ 7 ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಶುಕ್ರವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸ್ಮಗ್ಲರ್ಸ್ ಸೀಟ್ ಕೆಳಗಡೆ ಚಿನ್ನವನ್ನಿಟ್ಟು ಮೊದಲೇ ಬಂಧಿತ ಆರೋಪಿಗೆ ತಿಳಿಸಿದ್ದ. ಹೀಗಾಗಿ ಬಂಧಿತ ಆರೋಪಿ ಅದೇ ಸೀಟ್‌ಬುಕ್ ಮಾಡಿಕೊಂಡು ಬೆಂಗಳೂರು ಬರುತ್ತಿದ್ದಂತೆಯೇ ಚಿನ್ನವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ವಿಮಾನ ಇಳಿದು ಬಂದಿದ್ದಾನೆ. ಆದರೆ, ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲಿಸಿದಾಗ ಪತ್ತೆಯಾಗಿವೆ. ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ವಿಮಾನದ ಸೀಟ್ ಕೆಳಗೆ ಚಿನ್ನವಿಟ್ಟ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.