ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಸಮಾಜದ ಪ್ರತಿಯೊಬ್ಬರಿಗೂ ಮೂಲಸೌಕರ್ಯ ಕಲ್ಪಿಸುವುದು ಸ್ಥಳೀಯ ಆಡಳಿತ ಹಾಗೂ ಸರ್ಕಾರದ ಕರ್ತವ್ಯ. ಈ ಆಶಯಕ್ಕೆ ಧಕ್ಕೆಯಾದರೆ ಕಾನೂನು ಮೊರೆ ಹೋಗಿ ನ್ಯಾಯ ಪಡೆಯುವುದು ಸಹಜ. ಆದರೆ ದೇವನಹಳ್ಳಿ ನ್ಯಾಯಾಲಯದ ಸಂಕೀರ್ಣದಲ್ಲಿರುವ ಶೌಚಹೃಹವೇ ಗಬ್ಬು ನಾರುತ್ತಿದ್ದು, ನ್ಯಾಯವಾದಿಗಳೇ ಮೂಲಸೌಕರ್ಯಕ್ಕಾಗಿ ಪರದಾಡುವ ದುಸ್ಥಿತಿ ಎದುರಾಗಿದೆ.
ಹೌದು. ದೇವನಹಳ್ಳಿ ನ್ಯಾಯಾಲಯ ಸಂಕೀರ್ಣದಲ್ಲಿ ಕೋರ್ಟ್ ಸಿಬ್ಬಂದಿ, ವಕೀಲರು ಮತ್ತು ಸಾರ್ವಜನಿಕರಿಗಾಗಿ ನಿರ್ಮಿಸಿರುವ ಶೌಚಗೃಹ ಅವ್ಯವಸ್ಥೆಯ ಆಗರವಾಗಿದ್ದು, ಬಳಕೆ ಅಸಾಧ್ಯ ಎಂಬ ಸ್ಥಿತಿಯಲ್ಲಿದೆ.
ಸಿಬ್ಬಂದಿ ಬೆಳಗ್ಗೆಯಿಂದ ಸಂಜೆಯವರೆಗೂ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಬೇಕು. ದಿನಕ್ಕೆ ಒಂದೆರಡು ಬಾರಿಯಾದರೂ ಶೌಚಗೃಹಕ್ಕೆ ತೆರಳುವುದು ಸಾಮಾನ್ಯ. ಆದರೆ ಇಲ್ಲಿನ ಅವ್ಯವಸ್ಥೆ ಕಂಡು ಶೌಚಗೃಹದ ಸಹವಾಸವೇ ಬೇಡ ಎನ್ನುವಂತಾಗಿದೆ.
ದೀಪದ ಕೆಳಗೆ ಕತ್ತಲು: ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಪಂಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಕರ್ಯ ನೀಡದ ಬಗ್ಗೆ ಪ್ರಕರಣ ದಾಖಲಿಸಿ ನ್ಯಾಯಪಡೆಯುವುದು ಸಾಮಾನ್ಯ. ಆದರೆ, ದೇವನಹಳ್ಳಿ ಕೋರ್ಟ್ ಆವರಣದಲ್ಲಿರುವ ಶೌಚಗೃಹ ಯಾರದೋ ನಿರ್ಲಕ್ಷ್ಯಕ್ಕೆ ಗುರಿಯಾಗಿ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದೆ. ದೀಪದ ಕೆಳಗೆ ಕತ್ತಲು ಎಂಬ ಮಾತಿನಂತೆ ಸಮಾಜಕ್ಕೆ ದಾರಿದೀಪವಾಗಿರುವ ನ್ಯಾಯಾಲಯದ ಆವರಣದಲ್ಲಿನ ಅವ್ಯಸ್ಥೆ ವಕೀಲರಿಗೆ ಇರಿಸುಮುರಿಸು ತರಿಸಿದೆ.
ನ್ಯಾಯಾಧೀಶರು ಗಮನಹರಿಸಲಿ: ಕೋರ್ಟ್ ಆವರಣದಲ್ಲಿರುವ ಶೌಚಗೃಹ ಬಳಸಲು ಯೋಗ್ಯವಾಗಿಲ್ಲ. ಶೌಚಗೃಹದ ಬಳಿ ತೆರಳಿದರೆ ಸಾಕು ವಾಕರಿಗೆ ಬರುವಂತಿದ್ದು, ಇನ್ನು ಒಳಗೆ ಹೋದವರ ಗೋಳು ಹೇಳ ತೀರದಾಗಿದೆ. ಇದರಿಂದ ನಿತ್ಯ ಸಿಬ್ಬಂದಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನಾದರೂ ನ್ಯಾಯಾಧೀಶರು ಸಂಬಂಧಪಟ್ಟವರ ಗಮನ ಸೆಳೆಯಬೇಕಿದೆ.
ನಿತ್ಯ ಬೆಳಗ್ಗೆ 10ಕ್ಕೆ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರು ಅವರ ಪ್ರಕರಣಗಳು ನ್ಯಾಯಾಧೀಶರ ಮುಂದೆ ಬರುವವರೆಗೂ ಕೋರ್ಟ್ ಆವರಣದಲ್ಲೇ ಕಾಯುತ್ತಾರೆ. ಇದರ ನಡುವೆ ಶೌಚಗೃಹಕ್ಕೆ ತೆರಳುವಂತಾದರೆ ಪರದಾಡುವಂತಾಗಿದೆ. ಅದರಲ್ಲೂ ಮಹಿಳೆಯರ ಸಂಕಟ ಹೇಳತೀರದಾಗಿದ್ದು, ಸಂಬಂಧಿಸಿದವರು ಕನಿಷ್ಠ ಶೌಚಗೃಹದ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು.
ಡಾ.ವಿನೋದಕುಮಾರಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ
ವಕೀಲರ ಭವನದಲ್ಲಿ ಹಾಗೂ ಹೊರಗೆ ಇರುವ ಸಾರ್ವಜನಿಕ ಶೌಚಗೃಹ ಎರಡೂ ನಿರ್ವಹಣೆ ಕೊರತೆಯಿಂದ ಗಬ್ಬು ನಾರುತ್ತಿವೆ. ಸಾರ್ವಜನಿಕ ಶೌಚಗೃಹವಂತೂ ಹೇಳ ತೀರದಷ್ಟು ಅವ್ಯವಸ್ಥೆಯಿಂದ ಕೂಡಿದೆ. ಪಾದರಕ್ಷೆ ಹಾಕಿಕೊಂಡು ಒಳಗೆ ಹೋಗಿ ದೇಹಬಾಧೆ ತೀರಿಸಿಕೊಳ್ಳಲು ಆಗುವುದಿಲ್ಲ. ಅಷ್ಟು ಅನೈರ್ಮಲ್ಯದಿಂದ ಕೂಡಿದೆ. ಇದರ ನಿರ್ವಹಣೆಯನ್ನು ಪುರಸಭೆಗೆ ಅಥವಾ ಖಾಸಗಿ ವ್ಯಕ್ತಿಗಳಿಗೆ ನೀಡಿ, ನೀರಿನ ವ್ಯವಸ್ಥೆ ಕಲ್ಪಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಜತೆಗೆ ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸಲು ಮುಂದಾಗಬೇಕು.
ಹರೀಶ್, ರಾಜ್ಯ ವಕೀಲರ ಪರಿಷತ್ ಸದಸ್ಯ