ಜಿಲ್ಲೆ

ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ 50 ಕೋಟಿ

Davangere - Desk - Shobha Krishna Gowda

ಜಗಳೂರು: ಪಟ್ಟಣದಲ್ಲಿ ಶಿಥಿಲಗೊಂಡಿದ್ದ ತಾಲೂಕು ಸರ್ಕಾರಿ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 50 ಕೋಟಿ ರೂ. ಅನುದಾನ ನೀಡಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಜಗಳೂರಿನ ಮಹಾತ್ಮ ಗಾಂಧಿ ಹೊಸ ಬಸ್ ನಿಲ್ದಾಣ ಆವರಣದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆಯಿಂದ ತಾಲೂಕು, ರಾಜ್ಯ ಹೆದ್ದಾರಿ 65 ಮಲ್ಪೆ- ಮೊಳಕಾಲ್ಮೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನ ಬೇಡಿಕೆ ಹಾಗೂ ನಮ್ಮ ಒತ್ತಾಯವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಆಸ್ಪತ್ರೆ ಕಟ್ಟಡಕ್ಕೆ ನೆರವು ಘೋಷಿಸಿದ್ದಾರೆ.ಇದಕ್ಕೆ ಕಾರಣರಾದ ಸಚಿವ ದಿನೇಶ್ ಗುಂಡೂರಾವ್, ಎಸ್. ಮಲ್ಲಿಕಾರ್ಜುನ್, ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದಿಸುತ್ತೇನೆ ಎಂದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್ ರಸ್ತೆಯ ವರೆಗೆ 20 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು. ಹೈಟೆಕ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾಲೂಕಿನ ಮಹಾರಾಜನಹಟ್ಟಿ ಬಳಿ ಸುಮಾರು 16 ಕೋಟಿ ರೂ. ವೆಚ್ಚದ ಅಲ್ಪಸಂಖ್ಯಾತ ವಸತಿ ಶಾಲೆಗೆ ಅನುಮೋದನೆ ಸಿಕ್ಕಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೆಲ ಸರ್ಕಾರಿ ಕಚೇರಿ, ಹಾಸ್ಟೆಲ್ಗಳು ಅನೇಕ ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.್ನ ಶಾಶ್ವತವಾಗಿ ಈ ಸಮಸ್ಯೆ ದೂರ ಮಾಡಲು ಹಳೇಯ ತಾಲೂಕು ಕಚೇರಿ ತೆರವುಗೊಳಿಸಿ ಎಲ್ಲ ಇಲಾಖೆಯವರು ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲು ಸಂಕಿರ್ಣ ನಿರ್ಮಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಗ್ಯಾರಂಟಿ ಯೋಜನೆ ಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪ ಸುಳ್ಳಾಗಿದೆ. ಸಿಎಂ ಸಿದ್ದರಾಮಯ್ಯನವರು ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕೆ 60 ಕೋಟಿ ರೂ ಅನುದಾನ ಘೋಷಿಸಿದ್ದರೆ ಎಂದು ಹರ್ಷ ವ್ಯಕ್ತಪಡಿಸಿದರು.

ರಸ್ತೆ ವಿಸ್ತರಣೆಗೆ ಶಾಸಕರು ಮುಂದಾಗಿದ್ದು ವರ್ತಕರು, ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದರು.

ಪಪಂ ಅಧ್ಯಕ್ಷ ನವೀನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಪಪಂ ಸದಸ್ಯರಾದ ಆರ್. ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ಆದರ್ಶ, ಮಹಮದ್ ಅಲಿ, ಸಿದ್ದಪ್ಪ, ಶಕೀಲ್, ಮಂಜುನಾಥ್, ಲಲಿತಮ್ಮ ಶಿವಣ್ಣ, ಕುರಿ ಜಯ್ಯಣ್ಣ, ಶಾಂತಪ್ಪ, ಸಣ್ಣ ತಾನಾಜಿ ಗೋಸಾಯಿ, ಪಿಡಬ್ಲ್ಯುಡಿ ಎಇಇ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ ಸೇರಿ ಮತ್ತಿತರರಿದ್ದರು.

ಅಧಿಕಾರ ಹೋದರೂ ರಸ್ತೆ ವಿಸ್ತರಣೆ ಬಿಡೆನು: ರಾಜ್ಯದ ಎಲ್ಲ ತಾಲೂಕುಗಳಲ್ಲಿ ರಸ್ತೆ ವಿಸ್ತರಣೆಯಾಗಿವೆ. ಆದರೆ ಜಗಳೂರಿನಲ್ಲಿ ಅಸಹಕಾರದಿಂದ ಅದು ಕನಸಾಗಿಯೆ ಉಳಿದಿದೆ. ಸಾರ್ವಜನಿಕರ ಅನುಕೂಲಕ್ಕೆ ಹಾಗೂ ಪಟ್ಟಣದ ಅಭಿವೃದ್ಧಿಗಾಗಿ ನನ್ನ ಅಧಿಕಾರ ಹೋದರೂ ರಸ್ತೆ ವಿಸ್ತರಣೆಯಿಂದ ಹಿಂದೆ ಸರಿಯುವುದಿಲ್ಲ. ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತಿಲ್ಲ. ಮತದಾರರ ಋಣ ತೀರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ದೇವೇಂದ್ರಪ್ಪ ತಿಳಿಸಿದರು.

ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದಂತೆ ನೂರಾರು ವರ್ತಕರು ರಸ್ತೆ ವಿಸ್ತರಣೆಗೂ ಮುನ್ನವೆ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು ಅದರಲ್ಲಿ 50 ಅರ್ಜಿಗಳು ಇತ್ಯರ್ಥವಾಗಿವೆ. ಉಳಿದ ಅರ್ಜಿಗಳು ಇತ್ಯರ್ಥವಾದ ಕೂಡಲೇ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದರು.

ನಿರಾಶ್ರಿತರಿಗೆ ನಿವೇಶನ ಕೊಡಿ: ಎರಡು ವರ್ಷಗಳಿಂದ ಜೋಗಪ್ಪನಗುಡಿ ನಿವಾಸಿಗಳು ಬಸ್ ನಿಲ್ದಾಣ, ರಸ್ತೆ ಪಕ್ಕ ಬಿಡಾರ ಹಾಕಿಕೊಂಡಿದ್ದಾರೆ. ಕೆರೆ ಒತ್ತುವರಿ ನೆಪದಲ್ಲಿ ಸಣ್ಣ ನೀರಾವರಿ ಇಲಾಖೆ ಈ ಮನೆಗಳನ್ನು ತೆರವುಗೊಳಿಸಿದೆ. ಈ ಹಿಂದೆ ಪಪಂ ಇವರಿಗೆ ನಿವೇಶನ ಹಕ್ಕುಪತ್ರ ನೀಡಿತ್ತು. ಶಾಸಕರು ಕಾಳಜಿ ವಹಿಸಿ ನಿರಾಶ್ರಿತರಿಗೆ ನಿವೇಶನ ನೀಡಿ ಮನೆ ಮಂಜೂರು ಮಾಡಿಸುವಂತೆ ಪಪಂ ಸದಸ್ಯ ತಿಪ್ಪೇಸ್ವಾಮಿ ಶಾಸಕರಿಗೆ ಮನವಿ ಮಾಡಿದರು.

ಬೀದಿ ವ್ಯಾಪಾರಿಗಳನ್ನು ಕಡೆಗಣಿಸದಿರಿ: ಪಟ್ಟಣದಲ್ಲಿ ಮುಖ್ಯರಸ್ತೆ ವಿಸ್ತರಣೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ರಸ್ತೆ ಬದಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡ ವ್ಯಾಪಾರಿಗಳನ್ನು ಕಡೆಗಣಿಸಬಾರದು.

ರಸ್ತೆ ಅಭಿವೃದ್ಧಿ ನಂತರ ಪಾದಚಾರಿ ಮಾರ್ಗಕ್ಕೆ ಅವಕಾಶ ನೀಡಬೇಕು. ಜನ ಸಂಪರ್ಕ ಕಚೇರಿ ಮುಂಭಾಗ ದ ತರಕಾರಿ ಮಾರುಕಟ್ಟೆ ಬಳಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೆಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಮೇಲ್ಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಪಪಂ ಸದಸ್ಯೆ ಮಂಜಮ್ಮ ಶಾಸಕರಿಗೆ ಮನವಿ ಮಾಡಿದರು.