ನಾಗಮಂಗಲದ ತಾಪಂ. ಕಚೇರಿ ಹಿಂಭಾಗದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು. ದೇವರಾಜು, ಅಶೋಕ್‌ಕುಮಾರ್, ಚಂದ್ರಮೌಳಿ ಇದ್ದರು. 
ಜಿಲ್ಲೆ

ನಾಗಮಂಗಲದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಅಭಿನಯ್ ಎಚ್.ಎಂ

ನಾಗಮಂಗಲ: ತಾಲೂಕಿನ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಬೇಕೆಂಬ ಉದ್ದೇಶದಿಂದ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ಹೊರವಲಯ ಎಪಿಎಂಸಿ ಆವರಣದಲ್ಲಿ 2.5ಕೋಟಿ ರೂ.ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಹರಾಜು ಕಟ್ಟೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ, ಟಿಎಪಿಸಿಎಂಎಸ್‌ನ ಎಚ್.ಪಿ. ಪೆಟ್ರೋಲ್ ಬಂಕ್ ಹಿಂಭಾಗ ರೂ.50 ಲಕ್ಷ ರೂ.ವೆಚ್ಚದಲ್ಲಿ ಗೋದಾಮು ನಿರ್ಮಾಣ ಹಾಗೂ ತಾ.ಪಂ.ಕಚೇರಿ ಹಿಂಭಾಗ 2ಕೋಟಿ ರೂ.ವೆಚ್ಚದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಜಾಗವಿರಲಿಲ್ಲ. ತಾ.ಪಂ.ಗೆ ಸೇರಿದ ಈ ಜಾಗವನ್ನು ಸರ್ಕಾರದ ಅನುಮತಿ ಪಡೆದು ಕೃಷಿ ಇಲಾಖೆಗೆ ವರ್ಗಾಯಿಸಲಾಗಿದೆ. 2ಕೋಟಿ ರೂ.ವೆಚ್ಚದಲ್ಲಿ ಹೌಸಿಂಗ್ ಬೋರ್ಡ್ ಮೂಲಕ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು ತಾಲೂಕಿನ ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.

ರಾಜ್ಯ ಬೀಜ ನಿಮಗದ ಸಿಎಸ್‌ಆರ್ ನಿಧಿಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ತಾಲೂಕಿನ ಹಲವು ಶಾಲಾ ಕಾಲೇಜುಗಳಿಗೆ 11.5ಲಕ್ಷ ರೂ.ವೆಚ್ಚದಲ್ಲಿ ವಿದ್ಯಾರ್ಥಿಗಳ ಪಾಠ-ಪ್ರವಚನಗಳಿಗೆ ಅನುಕೂಲವಾಗುವ ಸ್ಮಾರ್ಟ್ ಕ್ಲಾಸ್‌ಗಳನ್ನು ಸಚಿವರು ಆಯಾ ಶಾಲಾ ಕಾಲೇಜಗಳ ಮುಖ್ಯಸ್ಥರಿಗೆ ವಿತರಿಸಿದರು.

ಕೃಷಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ದೇವರಾಜು, ಜಂಟಿ ಕೃಷಿ ನಿರ್ದೇಶಕ ಅಶೋಕ್‌ಕುಮಾರ್, ತಾ.ಪಂ.ಇಒ ಚಂದ್ರಮೌಳಿ, ಎಪಿಎಂಸಿ ಕಾರ್ಯದರ್ಶಿ ನಾಗೇಶ್, ಟಿಎಪಿಸಿಎಂಎಸ್ ಕಾರ್ಯದರ್ಶಿ ಮೋಹನ್‌ರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಪುರಸಭೆ ಸದಸ್ಯರಾದ ರಮೇಶ್, ತಿಮ್ಮಪ್ಪ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸಂಪತ್‌ಕುಮಾರ್, ಮುಖಂಡರಾದ ಎಸ್.ಸಿ.ಚೇತನ್‌ಕುಮಾರ್, ಎಸ್.ಬಿ.ರಮೇಶ್, ಶರತ್‌ರಾಮಣ್ಣ, ಪ್ರವೀಣ್‌ಕುಮಾರ್, ಗಿರೀಶ್, ಗೀತಾದಾಸೇಗೌಡ, ಚಿಕ್ಕಮ್ಮ ಹಲವರಿದ್ದರು.