ಜಿಲ್ಲೆ

ನಾಯಕನಹಟ್ಟಿಯಲ್ಲಿ ಶೀಘ್ರ ವಾಣಿಜ್ಯ ಮಳಿಗೆ

ಧನಂಜಯ ಎಸ್.ಹಕಾರಿ.

ನಾಯಕನಹಟ್ಟಿ: ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ನಬಾರ್ಡ್ ಯೋಜನೆಯಡಿ 10 ಕೋಟಿ ರೂ. ವೆಚ್ಚದ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸದಸ್ಯರು ಮತ್ತು ಸಾರ್ವನಿಕರ ಸಭೆಯಲ್ಲಿ ಮಾತನಾಡಿ, ಇದಕ್ಕೆ ಅಗತ್ಯವಾದ ಸ್ಥಳ ವೀಕ್ಷಣೆ ಮಾಡಿ ಅಂತಿಮಗೊಳಿಸಲಾಗಿದೆ.

ಸದ್ಯ ಹಳೆಯ ಬಸ್ ನಿಲ್ದಾಣ ಮತ್ತು ಸಂತೆ ಮೈದಾನದ ಪ್ರದೇಶ ಇದಕ್ಕೆ ಸೂಕ್ತವಾಗಿದ್ದು, 6.09 ಎಕರೆ ಪ್ರದೇಶ ಲಭ್ಯವಿದೆ ಎಂದರು.

ಈ ಪ್ರದೇಶದಲ್ಲಿ ಸದ್ಯ ಕೆಲ ಅಂಗಡಿ, ಮಳಿಗೆಗಳಿದ್ದು ಶಿಥಿಲಾವಸ್ಥೆಯಲ್ಲಿವೆ. ಇವುಗಳನ್ನು ನೆಲಸಮಗೊಳಿಸಿ ಸುಸಜ್ಜಿತ ವಾಣಿಜ್ಯ ಮಳಿಗೆ ನಿರ್ಮಾಣದ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು.

ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ನಿಧಾನವಾಗುತ್ತಿದೆ.

ಈಗೀರುವ ಗುತ್ತಿಗೆದಾರನನ್ನು ರದ್ದುಗೊಳಿಸಿ ಮತ್ತೊಬ್ಬ ವ್ಯಕ್ತಿಗೆ ಟೆಂಡರ್ ನೀಡಲು ಚಿಂತಿಸಲಾಗಿದೆ. ಕೆರೆಗಳಿಗೆ ಪೈಪ್ ಲೈನ್ ಅಳವಡಿಸಿದರೆ ಮುಂದೊಂದು ದಿನ ಜನರಿಗೆ ಅನುಕೂಲವಾಗಲಿದೆ ಎನ್ನುವ ವಿಶ್ವಾಸವಿದೆ ಎಂದರು.

ಬಸ್ ತಂಗುದಾಣ ಬಹುದಿನಗಳ ಬೇಡಿಕೆಯಾಗಿದ್ದು, ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಹಳೆಯ ಕಟ್ಟಡ ತೆರವುಗೊಳಿಸಿ ವಿಶಾಲವಾದ ಪ್ರದೇಶದ ಅಗತ್ಯವಿದೆ ಎಂದರು.

ಪಪಂ ಸದಸ್ಯ ಸೈಯದ್ ಅನ್ವರ್ ಮಾತನಾಡಿ, ಚುನಾವಣೆ ನಡೆದು ಎರಡು ವರ್ಷವಾದರೂ ಇಲ್ಲಿಯವರೆಗೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಿಸಿಲ್ಲ.

ಜನಪ್ರತಿನಿಧಿಗಳಿಲ್ಲದೆ ಪಪಂ ಆಡಳಿತ ಕುಂಠಿತವಾಗಿದೆ. ಮುಖ್ಯಾಧಿಕಾರಿ ವರ್ಗಾವಣೆಯಾಗಿದೆ. ಎರಡು ವಾರ್ಡ್‌ಗಳ ಮನೆಗಳು ಅನಧಿಕೃತ ಎಂದು ಘೋಷಣೆಯಾಗಿದೆ.

ಮನೆಗಳ ಮಾಲೀಕರಿಗೆ ತೊಂದರೆಯಾಗಿದೆ. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಸಕ್ರಮಗೊಳಿಸುವಂತೆ ಒತ್ತಾಯಿಸಿದರು.

ಕೌನ್ಸಿಲರ್ ಅಬಕಾರಿ ತಿಪ್ಪೇಸ್ವಾಮಿ, ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಎಸ್.ಉಮಾಪತಿ, ಬಾಲರಾಜ್, ಬಂಡೆಕಪಿಲೆ ಓಬಣ್ಣ, ಶ್ರೀಕಾಂತ್, ಬಸಣ್ಣ ಇತರರಿದ್ದರು.