ಜಿಲ್ಲೆ

4.5 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಹುಬ್ಬಳ್ಳಿ: ಪಾಲಿಕೆಯ ವಾರ್ಡ್ ನಂಬರ್ 61ರ ವ್ಯಾಪ್ತಿಯ ಗದಗ ರಸ್ತೆ ಕೋಠಾರಿ ನಗರ, ಶಾಲಿನಿ ಪಾರ್ಕ್, ಕ್ರೈಸ್ತ್ ಸಮುದಾಯದ ಸ್ಮಶಾನ, ಮಂಟೂರು ರಸ್ತೆ ಅರಳಕಟ್ಟಿ ಕಾಲನಿ, ಹರಿಶ್ಚಂದ್ರ ಕಾಲನಿ ಸೇರಿ ವಿವಿಧ ಬಡಾವಣೆಗಳಲ್ಲಿ ಸುಮಾರು 4.5ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಶಾಸಕ ಪ್ರಸಾದ ಅಬ್ಬಯ್ಯ ಅವರ ಸೂಚನೆ ಮೇರೆಗೆ ಪಾಲಿಕೆ ಸದಸ್ಯ ದೊರೆರಾಜ ಮಣಿಕುಂಟ್ಲ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿ, ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಈ ಹಿಂದೆಯೂ ಕೋಟ್ಯಂತರ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕೈಗೊಂಡು ಈ ಭಾಗದ ಜನರ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಅವರ ಅಭಿವೃದ್ಧಿ ಚಿಂತನೆಗೆ ನಾವೆಲ್ಲ ಚಿರಋಣಿ ಎಂದು ಹೇಳಿದರು.

ಸ್ಲಂ ಪ್ರದೇಶಗಳೇ ಹೆಚ್ಚಿರುವ ಪೂರ್ವ ವಿಧಾನಸಭಾ ಕ್ಷೇತ್ರವು ಅಭಿವೃದ್ಧಿಯಿಂದ ಕಂಗೊಳಿಸುವಂತಾಗಿದೆ. ಶಾಸಕರು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ ಎಂದರು.

ಪಾಲಿಕೆ ಮಾಜಿ ಸದಸ್ಯೆ ಸುಧಾ ಮಣಿಕುಂಟ್ಲ, ಮುಖಂಡರಾದ ವಿಜಯಕುಮಾರ ಅಬ್ಬಯ್ಯ, ಗುತ್ತಿಗೆದಾರ ಸುರೇಶ ತಳವಾರ, ಕಾಂಗ್ರೆಸ್ ವಾರ್ಡ್ ಅಧ್ಯಕ್ಷರು, ಸ್ಥಳಿಯರು ಪಾಲ್ಗೊಂಡಿದ್ದರು.