ಮಹಾರಥಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತೇರೆಳೆಯುವ ಮೂಲಕ ಚಾಲನೆ ನೀಡಿದರು.  
ಜಿಲ್ಲೆ

ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭ

ಲೋಕೇಶ್ ಮನು. ಡಿ

ಮೇಲುಕೋಟೆ: ವೈರಮುಡಿ ಜಾತ್ರಾ ಮಹೋತ್ಸವ ಮುಗಿಯುತ್ತಿದ್ದಂತೆ ಮೇಲುಕೋಟೆಯ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗುತ್ತದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಮಹಾರಥೋತ್ಸವಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೇಲುಕೋಟೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧವಿದೆ. ನಾಗರಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಜನರ ಸಹಕಾರ ಅಗತ್ಯ ಎಂದರು.

ರಾಜ್ಯ ಸರ್ಕಾರ ಮೇಲುಕೋಟೆಯ ಅಭಿವೃದ್ಧಿಗೆ 10 ಕೋಟಿ ರೂ. ವಿಶೇಷ ಅನುದಾನ ನೀಡಿದೆ. ಜತೆಗೆ ವಿವಿಧ ಇಲಾಖೆಗಳ ಅನುದಾನ ಸಹ ಲಭ್ಯವಿದ್ದು, ವ್ಯವಸ್ಥಿತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತದೆ. 30 ಕೋಟಿ ರೂ. ವೆಚ್ಚದಲ್ಲಿ ಮೇಲುಕೋಟೆ ಕಲ್ಯಾಣಿ ಮತ್ತು ಕೊಳಗಳು, ಮಂಟಪಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿತ್ತಾದರೂ ಯಾರೂ ಟೆಂಡರ್‌ನಲ್ಲಿ ಭಾಗವಹಿಸದ ಕಾರಣದಿಂದ ಮೀಸಲಿಟ್ಟ ಅನುದಾನ ಸರ್ಕಾರಕ್ಕೆ ವಾಪಸ್‌ಹೋಗಿದೆ. ಇದನ್ನು ಮರಳಿ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಮೇಲುಕೋಟೆಯಲ್ಲಿ ತಿರುಪತಿ ತಿರುಮಲ ದೇವಾಲಯದವರು ಸುಸಜ್ಜಿತ ವಸತಿಗೃಹಗಳನ್ನು ನಿರ್ಮಿಸಲು ಮುಂದೆ ಬಂದಿದ್ದಾರೆ. ಇದರ ಜತೆಗೆ ಹಲವು ದಾನಿಗಳು ಶೌಚಗೃಹ ಹಾಗೂ ಇತರ ಮೂಲಸೌಕರ್ಯ ಕಲ್ಪಿಸಲು ಮುಂದೆ ಬಂದಿದ್ದಾರೆ. ಮಠಾಧಿಪತಿಗಳು, ಸ್ವಾಮೀಜಿಗಳು, ಉದ್ಯಮಿಗಳೂ ಸಹ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ನೂತನ ರಥ ನಿರ್ಮಾಣಕ್ಕೆ ಸಂಕಲ್ಪ : ತಿರುಪತಿ-ತಿರುಮಲದ ಪೆರಿಯ ಜೀಯರ್ ಸ್ವಾಮೀಜಿ ಅವರು ಈಗಿರುವ ಮಹಾರಥವನ್ನು ನೀಡಿದ್ದು, ಈ ರಥ ಶಿಥಿಲವಾಗಿದೆ. ದೇವಾಲಯದ ಸ್ಥಾನೀಕರೊಂದಿಗೆ ತಿರುಪತಿಯಲ್ಲಿ ಸ್ವಾಮೀಜಿಯನ್ನು ಭೇಟಿ ಮಾಡಿ ನೂತನ ರಥನಿರ್ಮಾಣ ಮಾಡಿಕೊಡಲು ಕೋರಲಾಗುತ್ತದೆ. ರಥ ನಿರ್ಮಾಣಕ್ಕೆ ತಿರುಪತಿಯ ಸ್ವಾಮೀಜಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಇದಾಗದಿದ್ದರೆ ನಾವೇ ರಥ ನಿರ್ಮಾಣಕ್ಕೆ ಜುಲೈ ವೇಳೆಗೆ ಚಾಲನೆ ನೀಡಿ 2026ರ ವೈರಮುಡಿಗೆ ನೂತನ ರಥ ಸಮರ್ಪಣೆಯಾಗುವಂತೆ ಮಾಡುತ್ತೇವೆ. ಇದು ನಾನು ಮೇಲುಕೋಟೆಯ ರಥೋತ್ಸವದಲ್ಲಿ ಕೈಗೊಂಡ ಸಮಕಲ್ಪವಾಗಿದೆ ದರ್ಶನ್ ತಿಳಿಸಿದರು.