* ನಾಲ್ಕೂವರೆ ಕಿ.ಮೀ. ರಸ್ತೆ ಕಾಮಗಾರಿಗೆ ಕೂಡಿ ಬಂದಿಲ್ಲ ಕಾಲ
* ಸಂಚಾರಕ್ಕೆ ಅಡಚಣೆ, ಜನಾಕ್ರೋಶ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನ ಹೊಂಗನೂರು ಹಾಗೂ ಬಿ.ವಿ.ಹಳ್ಳಿ ಮಾರ್ಗದಲ್ಲಿ ಮಾಡುತ್ತಿರುವ ನಾಲ್ಕೂವರೆ ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಹಲವು ತಿಂಗಳಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.
ತಾಲೂಕಿನ ಹೊಂಗನೂರಿನಿಂದ ಕಬ್ಬಾಳು ಮಾರ್ಗದಲ್ಲಿ ಕೋಡಿಪುರ ಗೇಟ್‌ನಿಂದ ಬಿ.ವಿ. ಹಳ್ಳಿ ಸರ್ಕಲ್‌ವರೆಗೆ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಮಾಡಲು ಕಳೆದ ಐದು ತಿಂಗಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಕಾಮಗಾರಿಗಾಗಿ ರಸ್ತೆಯನ್ನು ಕಿತ್ತು ಈವರೆಗೂ ಹಾಗೆಯೇ ಬಿಡಲಾಗಿದೆ. ಇದರಿಂದ ಈ ಮಾರ್ಗದ ವಾಹನ ಸವಾರರು ಸಂಚಾರ ಮಾಡಲು ಸಾಕಷ್ಟು ಸಮಸ್ಯೆ ಉಂಟಾಗಿದೆ.
ಕೋಡಿಪುರ ಗೇಟ್‌ನಿಂದ ಬಿ.ವಿ. ಹಳ್ಳಿ ಸರ್ಕಲ್‌ವರೆಗೆ ರಸ್ತೆ ವಿಸ್ತರಣೆ ಮಾಡಿ ಡಾಂಬರೀಕರಣ ಮಾಡಲು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದ ಶಾಸಕರಾಗಿದ್ದಾಗ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪ್ರಾರಂಭದಲ್ಲಿ ಕಾಮಗಾರಿ ಭರದಿಂದ ಸಾಗಿತ್ತಾದರೂ ಕಳೆದ ಕೆಲ ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಕೋಡಿಪುರ ಮತ್ತು ಕನ್ನಿದೊಡ್ಡಿ ಗೇಟ್ ನಡುವೆ ರಸ್ತೆಯ ಮಧ್ಯ ಹಾದು ಹೋಗಿರುವ ಎರಡು ಕಿರು ಸೇತುವೆಗಳಿವೆ. ಈ ನಿಟ್ಟಿನಲ್ಲಿ ಸೇತುವೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಸೇತುವೆ ನಿರ್ಮಾಣ ಕಾಮಗಾರಿ ಸಹ ಮುಗಿದು ಎರಡ್ಮೂರು ತಿಂಗಳಾದರೂ ರಸ್ತೆಗೆ ಡಾಂಬರೀಕರಣ ಮಾಡದೆ ಹಾಗೆಯೇ ಬಿಡಲಾಗಿದೆ.
ಚನ್ನಪಟ್ಟಣದಿಂದ ಕನಕಪುರ ಹಾಗೂ ಸಾತನೂರು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲೇ ಪ್ರಸಿದ್ಧ ಕಬ್ಬಾಳಮ್ಮ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಮಂಗಳವಾರ, ಶುಕ್ರವಾರ, ಭಾನುವಾರ ಕಬ್ಬಾಳು ಕ್ಷೇತ್ರದಲ್ಲಿ ಹರಿಸೇವೆಗಳು ಹೆಚ್ಚಾಗಿ ನಡೆಯುವ ಕಾರಣ ಈ ಮಾರ್ಗದಲ್ಲಿ ಹೊರ ಜಿಲ್ಲೆಯ ಜನರು ಹೆಚ್ಚಾಗಿ ಓಡಾಡುತ್ತಾರೆ. ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಸಾಕಷ್ಟು ಅನಾನುಕೂಲ ಸೃಷ್ಟಿಸಿದೆ.
ಡಾಂಬರೀಕರಣಕ್ಕೆ ಹಾಕಿರುವ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. ದ್ವಿಚಕ್ರವಾಹನ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಇದರೊಂದಿಗೆ, ಕಾರುಗಳು ವೇಗವಾಗಿ ಸಂಚಾರ ಮಾಡಿದಾಗ ಪಕ್ಕದಲ್ಲಿ ಸಂಚಾರ ಮಾಡುವ ಬೈಕ್ ಸವಾರರು ರಸ್ತೆಯ ಗುಂಡಿಗೆ ಬಿದ್ದು ಗಾಯಗೊಳ್ಳುವುದು ಸಾಮಾನ್ಯ ಎನಿಸಿದೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಹೀಗಾಗಿ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.
ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಹಲವು ತಿಂಗಳುಗಳೇ ಕಳೆದಿದೆ. ಕಿರುಸೇತುವೆಗಳ ಕಾಮಗಾರಿಯೂ ಮುಕ್ತಾಯಗೊಂಡಿದೆ. ಇದರ ಮಧ್ಯೆ ಹೊಂಗನೂರಿನಿಂದ ಬಿ.ವಿ. ಹಳ್ಳಿವರೆಗೆ ನಾಲ್ಕೂವರೆ ಕಿ.ಮೀ ರಸ್ತೆಯಲ್ಲಿರುವ ಮರಗಳ ತೆರವಿಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಗದಿರುವುದೇ ಕಾಮಗಾರಿ ಸ್ಥಗಿತಕ್ಕೆ ಕಾರಣ ಎಂಬ ಮಾಹಿತಿ ಕೇಳಿ ಬಂದಿದೆ. ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆಯಲ್ಲಿರುವ ಮರಗಳ ತೆರವು ಅನಿವಾರ್ಯವಾಗಿದೆ. ನಿಯಮಾನುಸಾರ ಮರಗಳ ತೆರವಿಗೆ ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆಗೆ ಹಣ ಸಂದಾಯ ಮಾಡಬೇಕಿದ್ದು, ಇದು ವಿಳಂಬವಾಗುತ್ತಿರುವ ಕಾರಣ, ಕಾಮಗಾರಿ ಸ್ಥಗಿತಗೊಂಡು ಜನರಿಗೆ ಸಮಸ್ಯೆಯ ಭಾಗ್ಯ ದೊರಕಿದೆ.
ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಂತಹ ಪ್ರಮುಖ ರಸ್ತೆ ಅಭಿವೃದ್ಧಿಯಾಗುತ್ತಿರುವುದು ಸ್ವಾಗತಾರ್ಹ. ಆದರೆ, ಕಾಮಗಾರಿಗೆ ಚಾಲನೆಕೊಟ್ಟು ಹಲವು ತಿಂಗಳು ಕಳೆದರೂ ಇನ್ನೂ ಪೂರ್ಣಗೊಳ್ಳದೆ ಅರ್ಧಕ್ಕೆ ನಿಲ್ಲಿಸಿ ಸಮಸ್ಯೆ ಸೃಷ್ಟಿಸಿದೆ. ಈಗಾಗಲೇ ಹಲವು ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಯಾವುದಾದರೂ ಜೀವ ಬಲಿಯಾದರೇ ಅದರ ಹೊಣೆಯನ್ನು ಲೋಕೋಪಯೋಗಿ ಇಲಾಖೆಯೇ ಹೊರಬೇಕಾಗುತ್ತದೆ.ಅರುಣ್ ಕುಮಾರ್, ಬಿ.ವಿ.ಹಳ್ಳಿ.ರಸ್ತೆ ವಿಸ್ತರಣೆ ಮಾಡಲು ಮರಗಳನ್ನು ತೆರವು ಮಾಡಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆಯ ಅನುಮತಿ ಅವಶ್ಯವಾಗಿದೆ. ಅರಣ್ಯ ಇಲಾಖೆಗೆ ಭರಿಸಬೇಕಾದ ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸುತ್ತೇವೆ.ಪ್ರಕಾಶ್, ಎಇಇ, ಲೋಕೋಪಯೋಗಿ ಇಲಾಖೆ.