ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಗಡಿಭಾಗ ಗಣಿಗ ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಬಸರಾಳು ಹೋಬಳಿ ಗಣಿಗ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಆಯೋಜಿಸಿದ್ದ 2023-24ನೇ ಸಾಲಿನ ಜಲಜೀವನ್ ಮಿಷನ್‌ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಾದರಿ ಗ್ರಾಮಾಭಿವೃದ್ದಿಯೊಂದಿಗೆ ಶುದ್ಧ ಕುಡಿಯುವ ನೀರು ಎಲ್ಲರಿಗೂ ಲಭ್ಯವಾಗಬೇಕಿದೆ. ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮಕ್ಕೆ ಹತ್ತಾರು ಯೋಜನೆಗಳನ್ನು ತಂದು ಅಭಿವೃದ್ದಿ ಮಾಡಲಾಗುವುದು. ರೈತರಿಗೆ ಅನುಕೂಲ ಮತ್ತು ಪ್ರಾಣಿ ಪಕ್ಷಿಗಳು ನೀರು ಕುಡಿಯಲು ಹೇಮಾವತಿ ನಾಲೆಯಿಂದ ಕೆರೆಕಟ್ಟೆ ತುಂಬಿಸಲಾಗಿದೆ ಎಂದರು.
ಕುಡಿಯುವ ನೀರಿನ ನಲ್ಲಿ ಸಂಪರ್ಕಕ್ಕಾಗಿ 64.30 ಲಕ್ಷ ರೂ ಬಿಡುಗಡೆಯಾಗಿದೆ. ಗ್ರಾಮದ ಮನೆಗಳಿಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಇನ್ನು 3 ತಿಂಗಳಲ್ಲಿ ನೀಡಲಾಗುವುದು. ಗ್ರಾಮದೇವತೆ ದಂಡಿನೇಶ್ವರಿ ದೇವಾಲಯದಲ್ಲಿ ಸಮುದಾಯಭವನ ನಿರ್ಮಾಣಕ್ಕೆ ಜಾಗ ಲಭ್ಯವಿದ್ದು, ಮುಂದಿನ ದಿನದಲ್ಲಿ ಸುಸಜ್ಜಿತವಾಗಿ ರೂಪುಗೊಂಡು ಎಲ್ಲರ ಉಪಯೋಗಕ್ಕೆ ಬಲಿದೆ ಎಂದು ಹೇಳಿದರು.
ಗ್ರಾಮದ ಮುಖಂಡರಾದ ಯಜಮಾನ್ ಚಂದ್ರಶೇಖರ್, ಮಹೇಶ್, ಶಿವರಾಂ, ಕೋಡಿಯಯ್ಯ ಅಪ್ಪಾಜಿ, ಶ್ರೀಧರ್, ಪ್ರಮೀಳಾ, ಚಂದ್ರಶೇಖರ್ ಇತರರಿದ್ದರು.