ಚಿತ್ರದುರ್ಗ: ಇಲ್ಲಿಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮಣ್ಣು, ದೂಳುಮುಕ್ತ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಅದರ ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರವಷ್ಟೇ ಅಲ್ಲದೆ, ಗ್ರಾಮ, ಹಟ್ಟಿ, ತಾಂಡ, ಕೇರಿಗಳಲ್ಲೂ ನೂರಾರು ಕೋಟಿ ಅನುದಾನ ತರುವ ಮೂಲಕ ಸಿಮೆಂಟ್ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಜೆ.ಎನ್. ಕೋಟೆ, ಐನಳ್ಳಿ ಕುರುಬರಹಟ್ಟಿ, ಚನ್ನಯ್ಯನಹಟ್ಟಿ, ಜಿ.ಆರ್.ಹಳ್ಳಿ, ಆಯಿತೋಳ್ ಸೇರಿ ವಿವಿಧೆಡೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇನೆ. ಜನರು ಕೇಳಿದ ಕಡೆಗಳಿಗೆ ಅನುದಾನ ನೀಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.
ತಾಪಂ ಇಒ ಹನುಮಂತಪ್ಪ, ಜೆ.ಎನ್. ಕೋಟೆ ಗ್ರಾಪಂ ಅಧ್ಯಕ್ಷೆ ವಿದ್ಯಾಶ್ರೀ, ಸದಸ್ಯರಾದ ಶಿವಮೂರ್ತಿ, ಪಾಲಯ್ಯ, ತಿಮ್ಮಣ್ಣ, ಈರಣ್ಣ, ಪಿಡಿಒ ನಿರ್ಮಲಾ ಇತರರಿದ್ದರು.