ಚಿಕ್ಕಮಗಳೂರು: ಗ್ರಾಪಂಗಳಲ್ಲಿ ಅಭಿವೃದ್ಧಿ ಆಡಳಿತ ಹಾಗೂ ಮೌಲ್ಯಯುತ ಆಡಳಿತಕ್ಕೆ ಮಹತ್ವ ನೀಡಬೇಕು ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೂತನ ಸದಸ್ಯರಿಗೆ ಕಿವಿಮಾತು ಹೇಳಿದರು.
ನಗರ ಒಕ್ಕಲಿಗರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರ ಜನಸೇವಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ-ಅಂಗನವಾಡಿ ನಿರ್ಮಿಸಲು ಅಧಿಕಾರ:
ಇನ್ನು ಮುಂದೆ ಗ್ರಾಪಂಗಳಿಂದಲೇ ಆಯಾ ಊರಿನ ಶಾಲೆ, ಅಂಗನವಾಡಿಗಳನ್ನು ನಿರ್ಮಿಸುವುದಾದಲ್ಲಿ ಅದಕ್ಕೆ ಅಗತ್ಯವಿರುವ ಅನುದಾನ ಒದಗಿಸಿ ಹೊಸ ಕಟ್ಟಡಗಳ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ನೀಡಲಾಗುತ್ತದೆ. ಇದಕ್ಕಾಗಿ ಪ್ರತಿ ಗ್ರಾಪಂಗೆ 20 ಲಕ್ಷ ರೂ. ಅನುದಾನ ಒದಗಿಸುವುದಾಗಿ ತಿಳಿಸಿದರು.
ಘನತ್ಯಾಜ್ಯ ವಸ್ತು ನಿರ್ವಹಣೆ, ಸ್ವಚ್ಛತೆ, ಕುಡಿಯುವ ನೀರು, ರಸ್ತೆ ಹೀಗೆ ಅಭಿವೃದ್ಧಿಗೆ ಅಗತ್ಯವಿರುವ ಸಾಕಷ್ಟು ಅನುದಾನ ಲಭ್ಯವಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶೌಚಾಲಯ ನಿರ್ಮಿಸಿಕೊಳ್ಳಲು ಕೇವಲ 4 ಸಾವಿರ ರೂ. ಸಹಾಯಧನ ಸಿಗುತ್ತಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಪ್ರತಿ ಫಲಾನುಭವಿಗೆ 12 ಸಾವಿರ ರೂ. ನೀಡಿದ್ದು, ಪರಿಶಿಷ್ಟರಿಗೆ 15 ಸಾವಿರ ಸಹಾಯಧನ ನೀಡಲಾಗುತ್ತಿದೆ. ಇದನ್ನು ಬಳಸಿಕೊಂಡು ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ರೂಪಿಸಬೇಕು. ಶೌಚಾಲಯ ನಿರ್ಮಾಣಕ್ಕೆ ಸ್ಥಳಾಭಾವವಿರುವ ಕಡೆಗಳಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಆ ಕಾರಣ ನೀಡದೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು ಸಲಹೆ ನೀಡಿದರು.
ನರೇಗಾ ಬಳಸಲು ಸಲಹೆ:
ನರೇಗಾ ಯೋಜನೆಯಡಿ ನಮ್ಮ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳನ್ನು ಕೇಂದ್ರ ನೀಡಿತ್ತು. ಇವುಗಳಲ್ಲಿ ಈಗಾಗಲೇ 10.5 ಕೋಟಿ ಮಾನವ ದಿನಗಳನ್ನು ಪೂರ್ಣಗೊಳಿಸಲಾಗಿದೆ. ಈ ಸಾಧನೆ ಗುರುತಿಸಿ ಮತ್ತೆ 800 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಮುಂದೆ ಸಹ ನರೇಗಾ ಯೋಜನೆಯಡಿ ಕೆಲಸ ಒದಗಿಸಿ ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ತಿಳಿವಳಿಕೆ ನೀಡಿದರು.
ಗ್ರಾಮಗಳಲ್ಲಿ ಸಂಸ್ಕøತಿ ಉಳಿಸಲು ಮೌಲ್ಯಯುತ ಆಡಳಿತದ ಕಡೆಗೂ ಗಮನ ಕೇಂದ್ರೀಕರಿಸಬೇಕು. ಒಂದೇ ಒಂದು ಹಸು ಕಳ್ಳತನ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಗೋಹತ್ಯೆಗೆ ಅವಕಾಶ ಕೊಡಬಾರದು. ಈ ಸಂಬಂಧ ಈಗಾಗಲೇ ಕಾನೂನು ತರಲಾಗಿದ್ದು, ಪೆÇಲೀಸರು ಗೋರಕ್ಷಕರಿಗೆ ತೊಂದರೆ ಕೊಟ್ಟಲ್ಲಿ ಮುಂದೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋವಿನ ಶಾಪದಿಂದ ಅಧಿಕಾರ ಪತನ:
ಹಿಂದೆ ಕಾಂಗ್ರೆಸ್ ತನ್ನ ಸರ್ಕಾರವಿದ್ದಾಗ ಗೋಹತ್ಯೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಾವು ಹೇಳಿದಾಗ, ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಕ್ರಮ ಕೈಗೊಳುವುದಾಗಿ ಹೇಳಿತ್ತು. ಇದರ ಪರಿಣಾಮವಾಗಿ ಗೋವಿನ ಶಾಪದಿಂದಾಗಿ ಮುಖ್ಯಮಂತ್ರಿ ಆಗಿದ್ದವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನುಭವಿಸಿದರು. ಅಧಿಕಾರವನ್ನೂ ಕಳೆದುಕೊಂಡರು. ಈಗ ಕಾಂಗ್ರೆಸ್ ನೀಡಿದ ಬಳುವಳಿಯಿಂದಲೇ ಪಾಕ್ ಪರ ಘೋಷಣೆಗಳನ್ನು ಕೂಗುವಂತಾಗಿದೆ ಇಂಥದ್ದಕ್ಕೆ ಗ್ರಾಪಂಗಳಲ್ಲಿ ಅವಕಾಶ ನೀಡಬಾರದು ಎಂದರು.
ಗ್ರಾಪಂಗಳಲ್ಲಿ ಸೋಲಾರ್ ವ್ಯವಸ್ಥೆ:
ರಾಜ್ಯದಲ್ಲಿ ಸ್ವಂತ ಕಟ್ಟಡ ಹೊಂದಿರುವ ಗ್ರಾಪಂಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, 15ನೇ ಹಣಕಾಸು ಯೋಜನೆಯಲ್ಲಿ ರಾಜ್ಯ ಸರ್ಕಾರ 300 ಕೋಟಿ ರೂ. ಕಾಯ್ದಿರಿಸಲಾಗಿದೆ. ಈಗಾಗಲೇ ಈ ಸಂಬಂಧದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಎಲ್ಲ ಗ್ರಾಪಂಗಳು ಈ ಅವಕಾಶ ಬಳಸಿಕೊಳ್ಳಬೇಕು. ಬಹುತೇಕ ಗ್ರಾಪಂಗಳಲ್ಲಿ ಜನಸಾಮಾನ್ಯರ ಕೆಲಸಕ್ಕೆ ವಿದ್ಯುತ್ ಸಮಸ್ಯೆಯ ನೆಪ ಹೇಳಲಾಗುತ್ತಿದ್ದು, ಸೋಲಾರ್ ವ್ಯವಸ್ಥೆ ಅಳವಡಿಕೆಯಾದಲ್ಲಿ ಅದಕ್ಕೆ ಅವಕಾಶವಿಲ್ಲದಂತಾಗುತ್ತದೆ ಎಂದು ಹೇಳಿದರು.
ಐದು ದಿನಗಳ ತರಬೇತಿ:
ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಾಜ್ಯದ ಎಲ್ಲ ಗ್ರಾಪಂ ಸದಸ್ಯರಿಗೆ ಐದು ದಿನಗಳ ತರಬೇತಿ ಶಿಬಿರ ಏರ್ಪಡಿಸಲಿದ್ದು, 900 ಸಂಪನ್ಮೂಲ ವ್ಯಕ್ತಿಗಳ ಮೂಲಕ ತಲಾ 40 ಜನರ ಗುಂಪುಗಳನ್ನು ರಚಿಸಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಕ್ರಿಯಾ ಯೋಜನೆಗಳನ್ನು ಹೇಗೆ ಸಿದ್ಧಪಡಿಸಬೇಕು ಎನ್ನುವುದು ಸೇರಿದಂತೆ ಅಧಿಕಾರ ಬಳಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಹೇಗೆ ಮಾಡಬೇಕು ಎನ್ನುವುದನ್ನು ಶಿಬಿರದಲ್ಲಿ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.
ಮೋದಿ ಬ್ರಾಂಡ್ ನೇಮ್:
ಸಮಾರೋಪ ಭಾಷಣ ಮಾಡಿದ ಶಾಸಕ ಸಿ.ಟಿ.ರವಿ, ಗ್ರಾಪಂ ಸದಸ್ಯರು ದೇಶಕ್ಕೆ ಬಲಕೊಡುವ ಕಾರ್ಯಕ್ಕೆ ಮಾನವ ರೂಪದ ಇಟ್ಟಿಗೆಗಳಾಗಬೇಕು. ಮನುಷ್ಯ ಸಂಬಂಧಕ್ಕೆ ಒತ್ತು ನೀಡಿ ನಮ್ಮೂರ ಶಾಲೆ, ನಮ್ಮೂರ ಬಾವಿ ನಮ್ಮೆಲ್ಲರದ್ದು ಎನ್ನುವ ಮಾದರಿ ಗ್ರಾಪಂಗಳನ್ನು ನಿರ್ಮಿಸುವ ಮೂಲಕ ಸದಸ್ಯರು ನಿಮ್ಮೂರಿನ ಮೋದಿ ಎನ್ನುವ ಒಳ್ಳೆಯ ಬ್ರಾಂಡ್ ನೇಮ್ ಬೆಳೆಸಿಕೊಳ್ಳಬೇಕು ಎಂದರು.
ಗುಣಾತ್ಮಕವಾಗಿ ಬೆಳೆಯಬೇಕು
ಗ್ರಾಮಗಳಲ್ಲಿ ಜಾತೀಯತೆ, ಅಸ್ಪೃಶ್ಯತೆಗೆ ಅವಕಾಶವಿಲ್ಲದೆ, ದೇವಸ್ಥಾನ, ಸ್ಮಶಾನ ಎಲ್ಲರಿಗೂ ಮುಕ್ತವಾಗಿಸಿ ಸಂಖ್ಯಾತ್ಮಕವಾಗಿ ಅಷ್ಟೇ ಅಲ್ಲದೆ ಗುಣಾತ್ಮಕವಾಗಿ ಬೆಳೆಯಬೇಕು. ಐದು ವರ್ಷ ಮತದಾರರಿಗೆ ಉತ್ತರದಾಯಿಗಳಾಗುವವರು ಪ್ರಧಾನಿ ನರೇಂದ್ರ ಮೋದಿ ಅವರ ಸಬ್‍ಕಾ ಸಾತ್, ಸಬ್‍ಕಾ ವಿಕಾಸ್ ಎನ್ನುವ ಮಾದರಿ ಇರಿಸಿಕೊಂಡು ಗ್ರಾಮಗಳಲ್ಲಿ ಬದಲಾವಣೆ ತರಬೇಕು ಎಂದು ಕಿವಿಮಾತು ಹೇಳಿದರು.
1998 ರಲ್ಲಿ ಇಡೀ ರಾಜ್ಯದಲ್ಲಿ ಕೇವಲ 17 ಗ್ರಾಪಂಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಇಂದು ನಮ್ಮ ಜಿಲ್ಲೆಯಲ್ಲೇ 195 ಗ್ರಾಪಂಗಳಲ್ಲಿ 147ರಲ್ಲಿ ಬಹುಮತದಿಂದ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.
ಸೋಲುವವರಿಗೆ ಸೋಲೇ
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಈಗ ಧ್ಯೇಯ ನಿಷ್ಠ, ದೇಶನಿಷ್ಠ ಜನಪರ ಕೆಲಸಗಳ ಆಧಾರದಲ್ಲಿ ಕಮಲ ಅರಳುತ್ತಿದೆ. ಇವಿಎಂ ಮತದಾನದ ವ್ಯವಸ್ಥೆಯಲ್ಲಿ ಕೆಲವರು ಸೋಲು ಅನುಭವಿಸಿದ ಕೂಡಲೇ ಇವಿಎಂ ಕಾರಣ ಎನ್ನುತ್ತಿದ್ದರು. ಆದರೆ ಜನರ ವಿಶ್ವಾಸ ಕಳಕೊಂಡವರು ಇವಿಎಂ ಆದರೂ ಸೋಲುತ್ತಾರೆ. ಬ್ಯಾಲೆಟ್ ಪೇಪರ್ ಆದರೂ ಸೋಲುತ್ತಾರೆ ಎನ್ನುವುದಕ್ಕೆ ಗ್ರಾಪಂ ಚುನಾವಣೆ ನಿದರ್ಶನ ಎಂದು ಕಾಂಗ್ರೆಸ್‍ಗೆ ಟಾಂಗ್ ನೀಡಿದರು.
ಕಾಂಗ್ರೆಸ್ ಸಂಸ್ಕೃತಿ ಹೋಗಬೇಕು
ಕಾಂಗ್ರೆಸ್ ಮುಕ್ತ ಭಾರತ ಎಂದರೆ ಕಾಂಗ್ರೆಸ್ ಸಂಸ್ಕೃತಿ ಹೋಗಬೇಕು ಎಂದರ್ಥವೇ ಹೊರತು ಮತ್ತೊಂದು ಪಕ್ಷ ಇರಲೇಬಾರದು ಎಂದಲ್ಲ. ಕಾಂಗ್ರೆಸ್ ಮುಕ್ತ ಎಂದಾಗ ಕೆಲವರು ಟೀಕಿಸಿದರು. ಆದರೆ ಕಾಂಗ್ರೆಸ್ ಮುಕ್ತ ಭಾರತ ಎಂದರೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಗುಲಾಮಗಿರಿ, ಜಾತಿ, ಕೋಮುವಾದ, ಒಡೆದಾಳುವ ರಾಜಕಾರಣ ಇದರಿಂದ ಮುಕ್ತವಾಗಬೇಕು ಎನ್ನುವುದು ಆಶಯ ಎಂದರು.
ಕಟ್ಟಕಡೆಯ ಮನುಷ್ಯನಿಗೆ ಗ್ರಾಪಂ ಸೇವೆ
ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕಟ್ಟಕಡೆಯ ಮನುಷ್ಯನಿಗೆ ಸೇವೆ ಮಾಡಲು ಗ್ರಾಪಂ ಸದಸ್ಯರಿಗೆ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಗ್ರಾಪಂಗಳಲ್ಲೇ ಜನನ-ಮರಣ ಪತ್ರಗಳು ಸಹ ಲಭ್ಯವಾಗಲಿವೆ. ಆದಾಯ, ಜಾತಿ ಪ್ರಮಾಣ ಪತ್ರಗಳು, ಸಾಮಾಜಿಕ ಭದ್ರತೆಯ ಭತ್ಯೆಗಳಿಗಾಗಿ ಜನರು ತಾಲೂಕು ಕಚೇರಿ ಇತರೆ ಕಡೆಗೆ ಅಲೆಯಬೇಕಿದೆ ಮುಂದೆ ಅದೆಲ್ಲವೂ ಗ್ರಾಪಂಗಳಲ್ಲೇ ಸಿಗುವಂತಾಗಲಿದ್ದು, ಈ ಅವಕಾಶ ಬಳಸಿಕೊಂಡು ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್ ಹಾಗೂ ರವಿಕುಮಾರ್ ಮಾತನಾಡಿದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಬೆಳ್ಳಿಪ್ರಕಾಶ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರನ್ನು ಸನ್ಮಾನಿಸಲಾಯಿತು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಈರಣ್ಣ ಕಡಾಡಿ, ಬಿಜೆಪಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಜಿಲ್ಲಾ ಪ್ರಭಾರಿ ಚನ್ನಬಸಪ್ಪ, ಜಿ.ಪಂ.ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ಸಿ.ಆರ್.ಪ್ರೇಂಕುಮಾರ್, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುನೀತಾ ಜಗದೀಶ್ ಮತ್ತಿತರರು ವೇದಿಕೆಯಲ್ಲಿದ್ದರು.