ಹಾನಗಲ್ಲ; ಅಭಿವೃದ್ಧಿಗಾಗಿ ಜನ ಓಡಾಡುವಂತಾಗಬಾರದು. ಜನರ ಸುತ್ತ ಅಭಿವೃದ್ಧಿ ಓಡಾಡುವಂತಾಗಬೇಕು. ರಾಜಕೀಯವಾಗಿ ಅಧಿಕಾರದ ವಿಕೇಂದ್ರೀಕರಣ ಆಗಿದ್ದು, ಆರ್ಥಿಕ ಅಧಿಕಾರದ ವಿಕೇಂದ್ರೀಕರಣ ಆಗಬೇಕಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಸೋಮವಾರ ತಾಲೂಕಿನ ಶಿರಗೋಡ ಗ್ರಾಮದಲ್ಲಿ ಗ್ರಾಪಂ ಕಟ್ಟಡ ಅಭಿವೃದ್ಧಿ ಯೋಜನೆ ಹಾಗೂ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಲಾದ ರಾಜೀವ ಗಾಂಧಿ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರ ವಿಕೇಂದ್ರೀಕರಣದ ಸೂತ್ರ ಇಂದಿಗೂ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿದ್ದು, ಅದು ಗ್ರಾಮಗಳಿಗೆ ತಲುಪಬೇಕಿದೆ. ಶೀಘ್ರದಲ್ಲೇ ಜಿಲ್ಲೆಗೆ 15ನೇ ಹಣಕಾಸಿನ 2ನೇ ಕಂತು 25 ಕೋಟಿ ರೂ ಬಿಡುಗಡೆಯಾಗಲಿದೆ. ಬೇರೆ ಬೇರೆ ಯೋಜನೆಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ತರಲು ಪ್ರಯತ್ನಿಸುವುದಾಗಿ ಹೇಳಿದರು.
ರಾಜೀವ್ಗಾಂಧಿ ಸೇವಾ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿ ಸಂಪೂರ್ಣ ಅಧಿಕಾರ ನೀಡಲಾಗಿದೆ. ಚುನಾವಣೆ ಬಳಿಕ ಪಕ್ಷಬೇಧ ಮರೆತು ಗ್ರಾಮಸ್ಥರೆಲ್ಲರೂ ಒಗ್ಗೂಡಿ ಗ್ರಾಮಾಭಿವೃದ್ಧಿಗೆ ಮುಂದಾಗಬೇಕು. ಪಂಚಾಯತ್ರಾಜ್ ವ್ಯವಸ್ಥೆಯ ಕುರಿತು ಚುನಾಯಿತ ಸದಸ್ಯರು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕಿದೆ. ಅರ್ಹರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಗಮನ ನೀಡಬೇಕಿದೆ. ಗ್ರಾಮಗಳು ಯೋಜನೆಗಳಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಸಮರ್ಪಕ ರಸ್ತೆ, ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆ, ನೈರ್ಮಲ್ಯಕ್ಕೆ ಸದಸ್ಯರು ಮುಂದಾಗಬೇಕಿದೆ. ಇದರ ಮಧ್ಯೆ ಸಾರ್ವಜನಿಕರು ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸುವ ಮೂಲಕ ಕೈ ಜೋಡಿಸದಿದ್ದರೆ ಗ್ರಾಮಾಭಿವೃದ್ಧಿಗೆ ಗ್ರಹಣ ಹಿಡಿಯಲಿದೆ ಎಂದರು.
ತೆಲಗಡ್ಡಿಯ ಶಾಂತಪುರಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರೂಪಾ ಮಾಳಾಪುರ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಗ್ರಾಪಂ ಉಪಾಧ್ಯಕ್ಷ ಮುಸ್ತಫಾ ಮುಜಾವರ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಹನುಮಂತಪ್ಪ ಮರಗಡಿ, ವೀರೇಶ ಬೈಲವಾಳ, ಸಂದೀಪ ಪಾಟೀಲ, ತಾಪಂ ಇಒ ಪರಶುರಾಮ ಪೂಜಾರ, ಪಿಡಿಒ ಕಿರಣ ಹುಣಸಳ್ಳಿ ಇತರರು ಪಾಲ್ಗೊಂಡಿದ್ದರು.