ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಂಚಮಸಾಲಿ ಸಮಾವೇಶದಲ್ಲಿ ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಸಂಗಮೇಶ ಬಬಲೇಶ್ವರ, ಅಶೋಕ ಮನಗೂಳಿ, ಎಂ.ಆರ್. ಪಾಟೀಲ ಇತರರಿದ್ದರ 
ಜಿಲ್ಲೆ

ಅಭಿವೃದ್ಧಿ ರಾಜಕಾರಣ ಮುಖ್ಯ:ಶಿವಾನಂದ ಪಾಟೀಲ

ಇಂಡಿ: ಪಕ್ಷ, ಜಾತಿ, ಗುಂಪು, ಅಧಿಕಾರ ರಾಜಕಾರಣಕ್ಕಿಂತ ಅಭಿವೃದ್ಧಿ ರಾಜಕಾರಣ ಮುಖ್ಯ. ಜಾತಿ ಉಪಜಾತಿ ಸಾಂಕೇತಿಕ, ಅನ್ಯಾಯವನ್ನು ವಿರೋಧಿಸುವ, ಒಳ್ಳೆಯತನವನ್ನು ಗೌರವಿಸುವ ರಾಜಕೀಯ ಮಾಡೋಣ ಎಂದು ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ತತ್ವದಡಿ ನಮ್ಮ ಹಿರಿಯರು ಪ್ರೀತಿ, ವಿಶ್ವಾಸ, ಅಂಬೇಡ್ಕರ್‌ರ ಸಮತಾವಾದದ ಅಡಿ ರಾಜಕಾರಣ ರಾಜಕೀಯ ಮಾಡಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಿದ್ದರಾಮಯ್ಯ ಸರ್ಕಾರವಿದ್ದಾಗ ಕಾಂಗ್ರೆಸ್ ಸರ್ಕಾರ ಒಳ್ಳೆಯ ಆಡಳಿತ ನೀಡಿದೆ. ಈ ಜಿಲ್ಲೆಯ ನೀರಾವರಿಗಾಗಿ ಸಿದ್ದರಾಮಯ್ಯ ಸಾಕಷ್ಟು ಹಣ ನೀಡಿದರು. ಮತ್ತೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಪ್ರತಿವರ್ಷ 40ಸಾವಿರ ಕೋಟಿ ರೂ.ನೀಡುವ ಭರವಸೆ ನೀಡಿದ್ದಾರೆ. ಹಾಗಾದರೆ ವಿಜಯಪುರ ಜಿಲ್ಲೆ ಶಾಶ್ವತವಾಗಿ ನೀರಾವರಿಯಿಂದ ಸಮೃದ್ಧ ಜಿಲ್ಲೆಯಾಗಲಿದೆ ಎಂದರು.

ಕೆಪಿಸಿಸಿ ಸದಸ್ಯ ಸಂಗಮೇಶ ಬಬಲೇಶ್ವರ ಮಾತನಾಡಿ, ಪಂಚಮಸಾಲಿ ಜನಾಂಗದವರು ತ್ಯಾಗಿಗಳು, ಹೃದಯವಂತರು. ಕ್ಷೇತ್ರದ ಅಭಿವೃದ್ಧಿಗಾಗಿ ಜಾತಿಯತೆ ಮಾಡದೇ ಯಶವಂತರಾಯಗೌಡರನ್ನು ಬೆಂಬಲಿಸುವ ನಿರ್ಧಾರ ಹೃದಯವಂತಿಕೆ ಪ್ರಶಂಸನೀಯ ಎಂದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ ಸಾಮರಸ್ಯ ಮುಖ್ಯ, ರಾಜಕೀಯ ನಿಂತ ನೀರಲ್ಲ. ಹರಿಯುವ ನೀರು. ರಾಜಕಾರಣದಲ್ಲಿ ಹೃದಯವಂತಿಕೆ, ಶಾಂತಿ ಅಭಿವೃದ್ಧಿ ಮುಖ್ಯ ಎಂದರು.

ಸಿಂದಗಿ ಮತಕ್ಷೇತ್ರದ ಅಭ್ಯರ್ಥಿ ಅಶೋಕ ಮನಗೂಳಿ, ಎಂ.ಆರ್. ಪಾಟೀಲ, ಚಾಣಕ್ಯ ಕೆರಿಯರ್ ಅಕಾಡೆಮಿಯ ಬಿ.ಡಿ. ಪಾಟೀಲ, ಮಂಜುನಾಥ ಕಾಮಗೊಂಡ, ಶ್ರೀಶೈಲ ಮುಳಜಿ, ಪ್ರಭು ಹ್ಯಾಳದ ಮಾತನಾಡಿದರು.

ವೇದಮೂರ್ತಿ ಭದ್ರಯ್ಯಸ್ವಾಮಿ ಚಿಕ್ಕಪಟ್ಟ, ಎಂ.ಆರ್. ಪತಂಗೆ, ಭೀಮನಗೌಡ ಪಾಟೀಲ, ಎಸ್.ಬಿ. ಬೂದಿಹಾಳ ವಕೀಲರು, ಎಂ.ಆರ್. ಪಾಟೀಲ ಗೊಳಸಾರ, ದಾನಮ್ಮಗೌಡತಿ ಪಾಟೀಲ, ಜೀತಪ್ಪ ಕಲ್ಯಾಣಿ, ಮಲ್ಲನಗೌಡ ಪಾಟೀಲ, ಎಸ್.ಬಿ. ಗೌರಿ, ಅಪ್ಪು ತಾಂಬೆ, ಪಾಪು ಕಿತ್ತಲಿ, ರಾಜುಗೌಡ ಪಾಟೀಲ, ಮುದಕಣ್ಣ ಬ್ಯಾಳಿ, ಸಾಹೇಬಗೌಡ ಬಿರಾದಾರ ತದ್ದೇವಾಡಿ ಮತ್ತಿತರರಿದ್ದರು.