ಜಿಲ್ಲೆ

ಟಿಎಪಿಸಿಎಂಎಸ್ ಚುನಾವಣೆಗೆ ಅಭಿವೃದ್ಧಿ ವೇದಿಕೆ ಸಜ್ಜು

ಜಿ.ಹೆಚ್. ಧನ್ಯಕುಮಾರ್

ಮೂಡಿಗೆರೆ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ನ.2 ರಂದು ನಡೆಯಲಿದ್ದು, ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆ ಹೆಸರಿನಲ್ಲಿ ಸಮಾನ ಮನಸ್ಕರು ಪಕ್ಷಾತೀತವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿರುವುದಾಗಿ ಸಂಸ್ಥೆ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎಂ.ಲಕ್ಷ್ಮಣಗೌಡ ಹೇಳಿದರು.

ಟಿಎಪಿಸಿಎಂಎಸ್ 1997ರಿಂದ ಭತ್ತ ಸಂಸ್ಕರಿಸಿ ಅಕ್ಕಿ ತಯಾರಿಸುವ ಗಿರಣಿ ಸಂಘದ ಮುಖ್ಯ ಆದಾಯ ತರುವ ಶಾಖೆಯಾಗಿತ್ತು. ಅಕ್ಕಿಗಿರಣಿಗೆ ಪರ್ಯಾಯವಾಗಿ ಹೆಚ್ಚು ಲಾಭ ತರುವ ರೈತ ಭವನ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಹೆಚ್ಚುವರಿ ಭೋಜನ ಶಾಲೆ ನಿರ್ಮಿಸಲಾಗಿದೆ. ರೈತ ಭವನದ ಅಂಗಳಕ್ಕೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸಲಾಗಿದೆ. ಗೋಡಾನ್ ಭಾಗವನ್ನು ಪರಿವರ್ತನೆ ಮಾಡಿ 7 ವಾಣಿಜ್ಯ ಮಳಿಗೆ, 6 ಲಕ್ಷ ರೂ.ವೆಚ್ಚದಲ್ಲಿ ಶೌಚಗೃಹ ನಿರ್ಮಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಪಕ್ಷಾತೀತವಾಗಿ ಹೊಂದಾಣಿಕೆ ಮಾಡಿಕೊಂಡು ಉತ್ತಮ ಅನುಭವಿ ತಂಡವನ್ನು ಕಣಕ್ಕಿಳಿಸಲಾಗುವುದು. ನಮ್ಮ ತಂಡ ಅಧಿಕಾರಕ್ಕೆ ಬಂದರೆ ಎಂಜಿ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಮಳಿಗೆ ಕಟ್ಟಡವನ್ನು ಮೇಲಂತಸ್ತಿಗೆ ಏರಿಸಲಾಗುವುದು. ಈಗಿನ ಕಚೇರಿ ಕಟ್ಟಡ ತೆರವುಗೊಳಿಸಿ 4 ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ಹೊಸಕಟ್ಟಡದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಸಲಕರಣೆಗಳನ್ನು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಯು.ಹೆಚ್.ಹೇಮಶೇಖರ್, ಎಂ.ಎಸ್.ಅನಂತ, ಕೆ.ಪಿ.ಭಾರತಿ, ಶಾಂತಲಾ ನಾಗೇಶ್, ಎಂ.ಎನ್.ಮನು ಇದ್ದರು.