ಬೆಳಗಾವಿ ಫುಲ್‌ಬಾಗ್ ಗಲ್ಲಿ ರಸ್ತೆ ಹದಗೆಟ್ಟಿರುವುದು. 
ಜಿಲ್ಲೆ

ಅಭಿವೃದ್ಧಿ ಓಳು ರಸ್ತೆಯಲ್ಲಿ ಧೂಳು!

ಶಂಕರ ಗೆಜ್ಜಿ

ಬೆಳಗಾವಿ: ನಗರದ ಪುಲಬಾಗ ಗಲ್ಲಿ ಹಾಗೂ ತಾನಾಜಿ ಗಲ್ಲಿಯ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಸೌಲಭ್ಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಪ್ರಮುಖವಾಗಿ ಗಟಾರ, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೆಲವೆಡೆ ಗಟಾರ ಹಾಗೂ ಒಳಚರಂಡಿ ನೀರಿನ ಪೈಪ್‌ಲೈನ್‌ಗಳು ಒಂದಕ್ಕೊಂದು ಕೂಡಿದ್ದು, ಕೊಳಚೆ ನೀರು ಹರಿದು ಹೋಗದೆ ಗಬ್ಬು ವಾಸನೆ ಸೂಸುತ್ತಿವೆ. ಇದರಿಂದ ಸ್ಥಳೀಯರಿಗೆ ನಿತ್ಯ ತೊಂದರೆಯಾಗುತ್ತಿದೆ. ತಾನಾಜಿ ಗಲ್ಲಿಯ ರೈಲ್ವೆ ಲೈನ್ ಬಳಿ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಗಲ್ಲಿಯ ಬಿಪಿ ಪ್ಯಾಸೇಜ್‌ಗಳಲ್ಲಿ ಕಸ ಸಂಗ್ರಹವಾಗುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ. ರಸ್ತೆ, ಗಟಾರ, ಒಳಚರಂಡಿ ವ್ಯವಸ್ಥೆ ಹಾಗೂ ಗ್ಯಾಸ್ ಪೈಪ್‌ಲೈನ್ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಅನಾಹುತಕ್ಕೆ ಕಾಯುತ್ತಿವೆ ವಿದ್ಯುತ್ ಕಂಬಗಳು: ತಾನಾಜಿ ಗಲ್ಲಿಯಲ್ಲಿ ಹೆಸ್ಕಾಂನವರು ಅವೈಜ್ಞಾನಿಕವಾಗಿ ವಿದ್ಯುತ್ ಕಂಬ ಅಳವಡಿಸಿದ್ದಾರೆ. ಮನೆ ಗೋಡೆಗಳ ಪಕ್ಕದಲ್ಲೇ ಕಂಬ ಹಾಕಿರುವುದರಿಂದ ನಿವಾಸಿಗಳು ಕೈ ಚಾಚಿದರೆ ತಾಗುವಷ್ಟು ಹತ್ತಿರದಲ್ಲಿವೆ. ಮನೆಗಳ ಒಳಗೆ ಬಾಗಿರುವ ಕಂಬಗಳು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇಲ್ಲಿಯ ಬಹಳಷ್ಟು ಮನೆಗಳಿಗೆ ವಿದ್ಯುತ್ ಕಂಬಗಳು ಯಾವ ಸಂದರ್ಭದಲ್ಲಿಯಾದರೂ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿವೆ. ಸಣ್ಣ ಮಕ್ಕಳನ್ನು ಕಾಯುವುದು ನಿವಾಸಿಗಳಿಗೆ ದೊಡ್ಡ ಕೆಲಸವಾಗಿ ಬಿಟ್ಟಿದೆ. ಈ ಸಮಸ್ಯೆ ಬಗ್ಗೆ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ತಾನಾಜಿ ಗಲ್ಲಿಯ ರೈಲ್ವೆ ಲೈನ್‌ಗೆ ತಡೆಗೋಡೆ ಇಲ್ಲ. ಹೀಗಾಗಿ ಮಕ್ಕಳು ಮೈಮರೆತರೆ ಅಪಾಯ ತಪ್ಪಿದ್ದಲ್ಲ. ರೈಲ್ವೆ ಲೈನ್‌ಗೆ ತಡೆಗೋಡೆ ನಿರ್ಮಿಸುವಂತೆ ನಿವಾಸಿಗಳು ವರ್ಷಗಳಿಂದ ಒತ್ತಾಯಿಸುತ್ತ ಬಂದರೂ ಕ್ರಮ ಆಗುತ್ತಿಲ್ಲ.

ಕುಡಿಯುವ ನೀರು, ಗ್ಯಾಸ್ ಪೈಪ್‌ಲೈನ್ ಕಲ್ಪಿಸಲಿ

ಇನ್ನು ಫುಲ್‌ಬಾಗ್ ಗಲ್ಲಿಯಲ್ಲಿ ಎಲ್ಲೆಂದರಲ್ಲಿ ಧೂಳೇ ಹಾರುತ್ತದೆ. ರಸ್ತೆ ಸೌಲಭ್ಯ ಇಲ್ಲದಿರುವುದರಿಂದ ಸ್ಥಳೀಯರು ಧೂಳಿನಲ್ಲಿ ಬದುಕುವಂತಾಗಿದೆ. ಅಲ್ಲಲ್ಲಿ ಬಿ.ಪಿ. ಪ್ಯಾಸೇಜ್‌ಗಳಿದ್ದು, ಕಸ ಎಸೆಯುವ ಸ್ಥಳಗಳಾಗಿ ಮಾರ್ಪಟ್ಟಿವೆ. ಪ್ರತಿದಿನ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಕಸ ಎತ್ತುವುದಕ್ಕೆ ಬರುತ್ತಾರೆಯಾದರೂ ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಗಟಾರಗಳಲ್ಲಿ ಕಸ ಸಂಗ್ರಹವಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ನಿರಂತರ ಕುಡಿಯುವ ನೀರಿನ ಸೌಲಭ್ಯದ ಪೈಪ್‌ಲೈನ್, ಗ್ಯಾಸ್ ಪೈಪ್‌ಲೈನ್‌ಗಳ ಸಂಪರ್ಕ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮನೆಯೊಳಗೆ ಬಾಗಿದ ವಿದ್ಯುತ್ ಕಂಬಗಳು ಭಯ ಬೀಳಿಸುತ್ತಿವೆ. ಹಲವು ವರ್ಷಗಳಿಂದ ತೆರವುಗೊಳಿಸುವಂತೆ ತಿಳಿಸಿದರೂ ಸಂಬಂಧಿಸಿದವರು ಕ್ರಮ ಕೈಗೊಂಡಿಲ್ಲ. ಮಳೆ-ಗಾಳಿಗೆ ಅನುಹುತ ಸಂಭವಿಸುವ ಭಯ ಆವರಿಸಿದೆ. ಇನ್ನಾದರೂ ತೆರವುಗೊಳಿಸಬೇಕು.| ಮಹಾಂತೇಶ ಪುರಾಣಿಕ, ತಾನಾಜಿ ಗಲ್ಲಿ ನಿವಾಸಿ

| ಜಗದೀಶ ಹೊಂಬಳಿ ಬೆಳಗಾವಿ