ಜಿಲ್ಲೆ

ಅಭಿವೃದ್ಧಿಗೆ ಅಧಿಕಾರಿಗಳ ಅಡ್ಡಗಾಲು

ಎನ್.ವೆಂಕಟೇಶ್

ನಗರಸಭೆ ಸದಸ್ಯರ ಅಸಮಾಧಾನ ಕಾಮಗಾರಿಗೆ ಆದೇಶಪತ್ರ ನೀಡಲು ವಿಳಂಬ

ಗೌರಿಬಿದನೂರು: ವೆಚ್ಚಗಳ ಬಗ್ಗೆ ಮಾಹಿತಿ ನೀಡದ ಹಾಗೂ ಗುತ್ತಿಗೆ ಆದೇಶ ಪತ್ರಗಳನ್ನು ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ನಗರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಕಲೀಮ್ ಮಾತನಾಡಿ, ಜಿಲ್ಲಾಧಿಕಾರಿಗಳ 18 ತಿಂಗಳ ಆಡಳಿತಾವಧಿಯಲ್ಲಿ ನಡೆದಿರುವ ಜಮಾ, ಖರ್ಚಿನ ಮಾಹಿತಿ ಒದಗಿಸುವಂತೆ ಹಿಂದಿನ ಸಭೆಯಲ್ಲಿ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೂ ಮಾಹಿತಿ ಒದಗಿಸಿಲ್ಲ. ಮುಂದಿನ ಸಭೆಯಲ್ಲಾದರೂ ಒದಗಿಸಿ ಎಂದು ಆಗ್ರಹಿಸಿದರು.

ಸದಸ್ಯ ಆರ್.ಪಿ.ಗೋಪಿನಾಥ್ ಮಾತನಾಡಿ, ಗುತ್ತಿಗೆ ಆದೇಶ ಪತ್ರ ನೀಡುವಲ್ಲಿ ವಿಳಂಬ ಧೋರಣೆಯಿಂದಾಗಿ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆಯಾಗಿದೆ. ಸ್ವಚ್ಛತಾ ವಾಹನಗಳು ಬಂದು ಎರಡು ತಿಂಗಳಾದರೂ ಚಾಲಕರ ನೇಮಕವಾಗಿಲ್ಲ. ಕೂಡಲೇ 8 ಟಿಪ್ಪರ್ ಮತ್ತು ಜೆಸಿಬಿ ಚಾಲಕರ ನೇಮಕಾತಿ ಮಾಡಿ, ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸದಸ್ಯರ ಬೇಡಿಕೆಗಳಿಗೆ ಅಧ್ಯಕ್ಷರು ಸಹಮತ ವ್ಯಕ್ತಪಡಿಸುತ್ತಾರಾದರೂ ಅವು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

3ನೇ ವಾರ್ಡ್ ಸದಸ್ಯೆ ರಂಗಮ್ಮ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಸೂಕ್ತ ಅನುದಾನ ಒದಗಿಸುತ್ತಿಲ್ಲ, ವಾರ್ಡಿನ ಅಶ್ವತ್ಥಕಟ್ಟೆಯಿಂದ ವೀರಂಡನಹಳ್ಳಿವರೆಗೂ ರಸ್ತೆಬದಿ ಚರಂಡಿ ಮುಚ್ಚಿಹೋಗಿದ್ದು, ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಹೊಸ ಚರಂಡಿಗೆ ಅನುದಾನ ಒದಗಿಸುವಂತೆ ಒತ್ತಾಯಿಸಿದರು.

ಪೌರಾಯುಕ್ತೆ ಡಿ.ಎನ್.ಗೀತಾ ಪ್ರತಿಕ್ರಿಯಿಸಿ, ನಿಯಮಾವಳಿ ಪ್ರಕಾರ ನಿಗದಿತ ಸಮಯದಲ್ಲಿ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಇಲಾಖೆಯಿಂದ ಅನುಮೋದನೆ ದೊರೆತ ಬಳಿಕ ಚರಂಡಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ವಿವಿಧ ವಾರ್ಡ್‌ನ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಕೆಲವು ಅಭಿವೃದ್ಧಿ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ನಗರದ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಸಾಗಬೇಕು. ನನ್ನ ಕಡೆಯಿಂದ ಅಗತ್ಯ ಸಹಕಾರ ನಿಡಲಾಗುವುದು ಎಂದರು.

ಉಪಾಧ್ಯಕ್ಷ ಫರೀದ್, ಅಭಿಯಂತ ದಾನಿಯ, ನಗರಸಭೆ ಸದಸ್ಯರು ಇದ್ದರು.

ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ

ಸಭೆ ಪ್ರಾರಂಭಕ್ಕೂ ಮುನ್ನ ನಗರದ 550 ಬೀದಿಬದಿ ವ್ಯಾಪಾರಿಗಳಿಗೆ ಶಾಸಕ ಪುಟ್ಟಸ್ವಾಮಿಗೌಡ ನಗರಸಭೆಯಿಂದ ಗುರುತಿನ ಚೀಟಿ ವಿತರಿಸಿದರು. ನಗರಸಭೆಯಿಂದ ಈಗಾಗಲೇ 400ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸಾಲ ವಿತರಿಸಲಾಗಿದೆ. ಸರ್ಕಾರಿ ಸೌಲಭ್ಯ ಪಡೆಯಲು ಎಲ್ಲ ವ್ಯಾಪಾರಿಗಳು ತಪ್ಪದೇ ಹೆಸರು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದರು.