ಜಿಲ್ಲೆ

ಹಂತ ಹಂತವಾಗಿ ಗ್ರಾಮಗಳ ಅಭಿವೃದ್ಧಿ

ಕೋಲಾರ ಡೆಸ್ಕ್

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದು, ಹಂತ ಹಂತವಾಗಿ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ತಿಳಿಸಿದರು.

ತಾಲೂಕಿನ ಚೌಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡವಲ್ಲಬಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ಕಳೆದ ಎರಡು ವರ್ಷದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ನೂರಾರು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶೇ.50 ಕಾಮಗಾರಿ ಪೂರ್ಣಗೊಂಡಿದೆ, ಇನ್ನು ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಕಾಂಗ್ರೆಸ್​ ಸರ್ಕಾರಕ್ಕೆ ಇರುವ ಮೂರು ವರ್ಷದ ಅವಧಿಯಲ್ಲಿ ಕೋಲಾರ ವಿಧಾಸಭಾ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಜಿಲ್ಲೆಯ ಜನತೆಯ ಆಸೆಯಂತೆ ಕೋಲಾರಕ್ಕೆ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡಿದೆ ಎಂದರು.

ಪ್ರಮುಖವಾಗಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ದೇಶ, ವಿದೇಶಿ ಕಂಪನಿಗಳು ಜಿಲ್ಲೆಗೆ ಬರುತ್ತಿವೆ. ಇದರಿಂದ ಸಂತಸ ಉಂಟಾಗಿದೆ. ತಾಲೂಕಿನ ವೇಮಗಲ್​ ಕೈಗಾರಿಕೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್​ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಮುಂದಾಗಿದೆ. ಇದರಿಂದ ಸ್ಥಳಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ನಿರೀಕ್ಷೆ ಹೆಚ್ಚಿದೆ ಎಂದರು.

ತಾಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಕಲ್ಲಹಳ್ಳಿಯಲ್ಲಿ ನೂತನವಾಗಿ ಪಶು ವೈದ್ಯಕಿಯ ಆಸ್ಪತ್ರೆ ಶಂಕು ಸ್ಥಾಪನೆ ನೆರವೇರಿಸಿದರಲ್ಲದೆ. ಪಶು ಆಸ್ಪತ್ರೆ ನಿರ್ಮಿಸಲು ಸ್ಥಳ ನೀಡಿದ ದಾನಿಗಳನ್ನು ಶಾಸಕ ಕೊತ್ತೂರು ಮಂಜುನಾಥ್​ ಸನ್ಮಾನಿಸಿದರು.

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಶ್ರೀನಿವಾಸಪುರ ಮುಖ್ಯ ರಸ್ತೆಯಿಂದ ಅಂಬೇಡ್ಕರ್​ ನಗರ ಬಾರಂಡಡಳ್ಳಿ ಹೂದಲವಾಡಿ ಮಣಿಘಟ್ಟ ರಸ್ತೆ ಡಾಂಬರೀಕರಣ ಕಾಮಗಾರಿಗೆ 175 ಲಕ್ಷ ರೂ., ಮಾಲೂರು ಮುಖ್ಯ ರಸ್ತೆಯಿಂದ, ವಿಜಯನಗರ ಪವನ್​ ಕಾಲೇಜ್​ ಸರ್ವಿಸ್​ ರಸ್ತೆ ಡಾಂಬರೀಕರಣ ಕಾಮಗಾರಿಗೆ 175 ಲಕ್ಷ ರೂ., ಮುದುವತ್ತಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ 40 ಲಕ್ಷ ರೂ., ವಕ್ಕಲೇರಿ ಗ್ರಾಮದಲ್ಲಿ ಸಿಮೆಂಟ್​ ರಸ್ತೆ ಕಾಮಗಾರಿಗೆ 35 ಲಕ್ಷ ರೂ., ಮೈಲಾಂಡಳ್ಳಿಯಿಂದ ಬಣಕನಹಳ್ಳಿ ಕೂತಂಡಹಳ್ಳಿಯಿಂದ ಅಲಹಳ್ಳಿ ಮೂಲಕ ಮಾಲೂರು ರಸ್ತೆಯ ಸಂಪರ್ಕ ಕಲ್ಪಿಸುವ ರಾಸ್ತೆ ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿಗೆ 4.95 ಕೋಟಿ ರೂ., ಕೋಲಾರ ತಾಲೂಕು ಸೂಲೂರು ಗ್ರಾಮ ಪಂಚಾಯಿತಿ ಕಟ್ಟಡದ ಮೊದಲನೇ ಮಹಡಿ ನಿಮಾರ್ಣ ಕಾಮಗಾರಿ ಭೂಮಿ ಪೂಜೆ, ಕೋಲಾರ ತಾಲೂಕು ರಾಜಕಲ್ಲಳ್ಳಿ ಗ್ರಾಮದ ಪಶು ವೈದ್ಯಕಿಯ ಆಸ್ಪತ್ರೆ ಕಾಮಗಾರಿಗೆ 49.95 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಎಲ್ಲ ಕಾಮಗಾರಿಗಳಿಗೆ ಭೂಮಿಪೂಜೆ ಶಾಸಕ ಕೊತ್ತೂರು ಮಂಜುನಾಥ ನೆರವೇರಿಸಿದರು.