ಬೆಟ್ಟದಪುರ:ಪಿರಿಯಾಪಟ್ಟಣ ತಾಲೂಕಿನ ಗ್ರಾಮಾಂತರ ಪ್ರದೇಶದ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಗ್ಗಲಿಕೊಪ್ಪಲು ಗ್ರಾಮದಲ್ಲಿ ಸೋಮವಾರ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳಿಗೆ ಬೇಕಾದ ಮೂಲ ಸೌಕರ್ಯಗಳ ಕೊರತೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಕ್ರಮವಹಿಸಬೇಕು. ಬೇಸಿಗೆ ಹಿನ್ನೆಲೆ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳಿಗೆ ಬಂದಿರುವ ಅನುದಾನದಲ್ಲಿ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವ ಮೂಲಕ ಅಭಿವೃದ್ಧಿಗೆ ಸಹಕರಿಸಿ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸಕ್ಕೆ ತುಒ್ತ ನೀಡಲಾಗುವುದು. ಗ್ರಾಮದಲ್ಲಿ ಆಗಬೇಕಿರುವ ಕೆಲಸಗಳು, ಸಮಸ್ಯೆಗಳು ಇದ್ದರೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತನ್ನಿರಿ. ಪ್ರಮಾಣಿಕವಾಗಿ ಜನಪರ ಕೆಲಸ ಮಾಡುವ ಮೂಲಕ ಕ್ಷೇತ್ರದ ಸೇವೆ ಮಾಡುತ್ತಿದ್ದೇನೆ ಎಂದರು.
ಬೆಟ್ಟದಪುರ ಸಮೀಪದ ಕಳ್ಳಿಕೊಪ್ಪಲು, ತಂದ್ರೆಗೂಡಿ ಕೊಪ್ಪಲು ಹಾಗೂ ದೊಡ್ಡೇಗೌಡನಕೊಪ್ಪಲು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಸಾರ್ವಜನಿಕರು ಗ್ರಾಮಕ್ಕೆ ಸಮುದಾಯ ಭವನ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಸೌಲಭ್ಯ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಸಚಿವರ ಗಮನಕ್ಕೆ ತಂದರು.
ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ ಸ್ವಾಮಿ, ಅತ್ತಿಗೋಡು ಗ್ರಾಮ ಪಂಚಾಯತಿ ಅಧ್ಯಕ್ಷ ಗಂಗಾಧರ್, ಸದಸ್ಯ ಮಲ್ಲೇಶ್, ಚಂದ್ರಹಾಸ, ಸರಸ್ವತಿ, ತಾ.ಪಂ. ಇಒ ಸುನೀಲ್ ಕುಮಾರ್, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಇಂಜಿನಿಯರ್ ವಿಜಯ್, ಉಪತಹಸೀಲ್ದಾರ್ ಶಶಿಧರ್, ಪಿಡಿಒ ಮನು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಗಳ ಮುಖಂಡರು ಇದ್ದರು.