ಕಣಿವೆಬಸವನಹಳ್ಳಿಯಲ್ಲಿ ಗ್ರಾಮಸ್ಥರು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಉತ್ಸವ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು. ರಾಜಮ್ಮ ರುದ್ರಯ್ಯ, ಅಶೋಕ್ ಇದ್ದರು. 
ಜಿಲ್ಲೆ

ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ

ರವಿಕುಮಾರ್ ಪಿ. ಕೆ

ಶನಿವಾರಸಂತೆ: ಗ್ರಾಮದ ಜನರಲ್ಲಿ ಒಗ್ಗಟ್ಟಿದರೆ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಶನಿವಾರ ಅಭಿಪ್ರಾಯಪಟ್ಟರು.

ಸಮೀಪದ ಕಣಿವೆ ಬಸವನಹಳ್ಳಿ ಗ್ರಾಮಸ್ಥರು ಪ್ರತಿಷ್ಠಾಪಿಸಿರುವ ಗೌರಿ-ಗಣೇಶ ಮೂರ್ತಿ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರ ಆರಾಧನೆ, ಆಧ್ಯಾತ್ಮಿಕ ಚಿಂತನೆಯಿಂದ ಸಂಸ್ಕೃತಿ, ಸಂಸ್ಕಾರ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕಣಿವೆಬಸವನಹಳ್ಳಿ ಗ್ರಾಮಸ್ಥರು ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಗ್ರಾಮಸ್ಥರೆಲ್ಲರೂ ಭಾಗಿಯಾಗಿರುವುದು ಒಗ್ಗಟ್ಟಿನ ಸಂಕೇತವಾಗಿದ್ದು, ಮಾದರಿಯಾಗಿದೆ ಎಂದರು.

ನನೆಗುದಿಗೆ ಬಿದ್ದಿರುವ ಗ್ರಾಮದ ಅಭಿವೃದ್ಧಿಯನ್ನು ಆದ್ಯತೆ ಮೇಲೆ ಹಂತಹಂತವಾಗಿ ಮಾಡಲಾಗುವುದು. ಇದರ ಜತೆಯಲ್ಲಿ ರಸ್ತೆ, ಸೇರಿದಂತೆ ಇತರ ಮೂಲ ಸೌಲಭ್ಯ ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಜಮ್ಮ ರುದ್ರಯ್ಯ, ಪ್ರಮುಖರಾದ ಅಶೋಕ್, ಎನ್.ಬಿ.ನಾಗಪ್ಪ, ಕೊಮರಪ್ಪ, ಗೌರಿ ಗಣೇಶ ಸೇವಾ ಸಮಿತಿ ಅಧ್ಯಕ್ಷ ಹರೀಶ್ ಮುಂತಾದವರು ಹಾಜರಿದ್ದರು.