ಗುಳೇದಗುಡ್ಡ: ಗ್ರಂಥ ರಚನೆ, ಸಂಪಾದನೆ ಕಷ್ಟದ ಕೆಲಸ. ಸಾಕಷ್ಟು ಅಲೆದಾಟ, ವಿಷಯ ಗ್ರಹಿಕೆ, ಸಂಗ್ರಹದ ಮೂಲಕ ಪುರಾಣ ಗ್ರಂಥ ರಚನೆಗೊಂಡಿದೆ. ಅದರಂತೆ ಗುಳೇದಗುಡ್ಡದ ಕುರುಹಿನಶೆಟ್ಟಿ ಸಮಾಜದ ಹವ್ಯಾಸಿ ಕಲಾವಿದರ ಕುರಿತಾಗಿ ಬರೆದ ಗ್ರಂಥವೂ ಚಿಕ್ಕದಾಗಿದ್ದರೂ ಅನೇಕ ರಂಗಕಲಾವಿದರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ, ಚಿಂತಕ ಸಿದ್ಧಲಿಂಗಪ್ಪ ಬರಗುಂಡಿ ಹೇಳಿದರು.
ಪಟ್ಟಣದ ಗಿರೀಶ ಪ್ರಕಾಶನ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ರಾಂತ ಪ್ರಾಧ್ಯಾಪಕ ಮಹಾದೇವಯ್ಯ ನೀಲಕಂಠಮಠ ರಚಿಸಿದ ಎರಡು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸ್ತ್ರಬದ್ಧವಾಗಿ ಗ್ರಂಥ ರಚನೆಯಾಗಿದೆ. ಇದು ಕುರುಹಿನಶಟ್ಟಿ ಸಮಾಜದ ಧರ್ಮ ಗ್ರಂಥವೆಂತಲೂ ಕರೆಯಬಹುದು. ಇಂದು ರಂಗಭೂಮಿ ಕಲಾವಿದರ ಅಭಿವೃದ್ಧಿ ಅವಶ್ಯಕವಾಗಿದೆ. ಕಲಾವಿದರಿಗೆ ಸರ್ಕಾರದ ಸಾಲ ಸೌಲಭ್ಯ, ಸಹಾಯ ನೀಡುವ ಕೆಲಸ ಮಾಡಲಿ ಎಂದರು.
ಧಾರವಾಡದ ವಿಶ್ರಾಂತ ಪ್ರಾಚಾರ್ಯ ಟಿ.ಬಿ. ಚಿಲಕವಾಡ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಶ್ರೀ ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು.
ಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಪೀಠಾಧ್ಯಕ್ಷ ಶ್ರೀ ಶಿವಶಂಕರ ಶಿವಾಚಾರ್ಯರು, ಗುರುಸಿದ್ಧೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಕಲೆಗೆ ತಮ್ಮ ಜೀವ ಸವೆದು ಹೋದ ಕಲಾವಿದರನ್ನು ಈ ಗ್ರಂಥ ಗುರುತಿಸುವ ಕೆಲಸ ಮಾಡಿದೆ. ಒಂದು ಜನಾಂಗದವರ ಕಲೆ ಮತ್ತು ಸಂಸ್ಕೃತಿ ಪರಿಚಯಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ಅವರ ಶ್ರಮ ಸಾರ್ಥಕವಾದುದು ಎಂದರು.
ಲೇಖಕ ಮಹಾದೇವಯ್ಯ ನೀಲಕಂಠಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವಕೇಂದ್ರ, ಜೇರಕಲ್ ನಾಟ್ಯ ಸಂಘ, ನಗ್ಲಿಪೇಟೆ ಮ್ಯಾಳ, ಜಾಗತಿಕ ಲಿಂಗಾಯತ ಮಹಾಸಭಾ, ನೀಲಕಂಠಪ್ರಿಯ ಮಹಿಳಾ ಸಂಘದ ಸದಸ್ಯರು ಇದ್ದರು.
ಈರಣ್ಣ ಹಳ್ಳಿ, ಡಾ. ರಾಜಶೇಖರ ಬಸುಪಟ್ಟದ, ಡಾ. ಎಸ್.ವಿ. ಬನ್ನಿ, ಸಂಗಮೇಶ ಹುನಗುಂದ, ಸಂಗಣ್ಣ ಚಿಕ್ಕಾಡಿ, ರಾಜು ಜಾಲಿಗಿಡದ, ಚಂದ್ರಶೇಖರ ಹೆಗಡೆ, ಗೋಪಾಲ ಹಳ್ಳೂರ, ಸಂಜಯ ಬರಗುಂಡಿ, ರಾಚಣ್ಣ ಕೆರೂರ, ದ್ರಾಕ್ಷಾಯಣಿ ಹಿರೇಮಠ, ಡಾ.ಗೀರಿಶ ನೀಲಕಂಠಮಠ, ಮುರುಗೇಶ ಶೇಖಾ, ರಮೇಶ ಅಗಸಿನಮನಿ, ರವಿ ಕಲಕೇರಿ, ಪೊಲೀಸಪ್ಪ ಮಾನುಟಗಿ ಇದ್ದರು.