ಜಿಲ್ಲೆ

ಸದಸ್ಯರ ಸಹಭಾಗಿತ್ವ ದಿಂದ ಸಂಘದ ಅಭಿವೃದ್ಧಿ

ಮೂಡಿಗೆರೆ: ಪ್ರಾಮಾಣಿಕತೆಯಿಂದ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ಸಂಘಗಳನ್ನು ಯಶಸ್ಸಿನಿಂದ ಮುನ್ನಡೆಸಬೇಕು ಎಂದು ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ದಿವಾಕರ್ ಹೇಳಿದರು.

ಗೌಡಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲ ಮಾತನಾಡಿ, ಸಹಕಾರ ಸಂಘದಲ್ಲಿ ಸದಸ್ಯರ ಸಹಭಾಗಿತ್ವ ಬಹುಮುಖ್ಯ. ಸದಸ್ಯರಾದವರು ಸಹಕಾರ ಸಂಘದಲ್ಲಿ ನಿರಂತರ ವ್ಯವಹಾರ ನಡೆಸಿದರೆ ಸಂಘದ ಬೆಳವಣಿಗೆಗೆ ಸಹಾಕಾರಿಯಾಗುತ್ತದೆ. ಸಂಘದ ಮೂಲಕ 3 ಲಕ್ಷದವರೆಗೆ ರೈತರಿಗೆ ಬಡ್ಡಿರಹಿತ ಬೆಳೆ ಸಾಲ ನೀಡಲಾಗುತ್ತದೆ. ಸರ್ಕಾರ 5 ಲಕ್ಷದ ವರೆಗೆ ಶೂನ್ಯಬಡ್ಡಿದರದಲ್ಲಿ ಸಾಲ ನೀಡುವುದಾಗಿ ಘೋಷಣೆ ಮಾಡಿದೆಯಾದರೂ ಜಾರಿಗೆ ತಂದಿಲ್ಲ. ಹೊಸ ಸಾಲ ನೀಡುತ್ತಿಲ್ಲ. ಸರ್ಕಾರ ನೀಡಿರುವ ಭರವಸೆಯನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.

ಗೌಡಳ್ಳಿ ಸಹಕಾರ ಸಂಘಕ್ಕೆ 70 ವರ್ಷದ ಇತಿಹಾಸವಿದ್ದು, ಹಲವಾರು ಏಳುಬೀಳುಗಳ ನಂತರ ಸಂಘ ಸದೃಢವಾಗಿ ಬೆಳೆದಿದೆ. ಪ್ರತಿವರ್ಷ ಅತ್ಯಧಿಕವಾಗಿ ನಿವ್ವಳ ಲಾಭಗಳಿಸುತ್ತಿದೆ. ಸಂಘದಲ್ಲಿ ರೈತರಿಗೆ ಸಾಲ ಸೌಲಭ್ಯ, ಪಡಿತರ, ರಸಗೊಬ್ಬರ, ಸುಣ್ಣ, ಪ್ಲಾಸ್ಟಿಕ್ ಚೀಲಗಳ ವಿತರಣೆ, ಹಿಟ್ಟಿನ ಗಿರಣಿ ಸೇವೆ ಒದಗಿಸಲಾಗುತ್ತಿದೆ. ಊರುಬಗೆ ಗ್ರಾಮದಲ್ಲಿ ಗೊಬ್ಬರದ ಗೋದಾಮು ನಿರ್ಮಿಸಲಾಗಿದೆ. 2024-25ನೇ ಸಾಲಿನಲ್ಲಿ ಸಂಘ 18 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 8 ಡಿವಿಡೆಂಡ್ ಘೋಷಿಸಲಾಗಿದೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಹೆಚ್.ಜಿ.ವೆಂಕಟೇಶ್, ನಿರ್ದೇಶಕರಾದ ಕೃಷ್ಣೇಗೌಡ, ಕೆ.ಎಲ್.ಚಂದ್ರೇಗೌಡ, ವಿನೇಶ್, ಸಂತೋಷ್, ಜಿ.ಟಿ.ರಮೇಶ್, ಅರುಣ್, ನಿಂಗಪ್ಪ, ಜಯಮ್ಮ, ಸುಮಾ ರವಿ, ಎಸ್.ಇ.ಸುರೇಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್, ಸಿಇಓ ಗಣೇಶ್, ಸಿಬ್ಬಂದಿ ಗೀತಾ, ಸುಚಿತ್ರಾ, ಪ್ರಸನ್ನ, ಕೆ.ಪಿ.ನಾಗೇಶ್ ಇತರರಿದ್ದರು.