ಬ್ಯಾಡಗಿ: ಪಟ್ಟಣದ ಮಲ್ಲೇಶ್ವರ ಬೆಟ್ಟದ ರಾಜಕಾಲುವೆ ಹಾಗೂ ಮಧ್ಯಭಾಗದಲ್ಲಿ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹರಿದುಹೋಗುವ ನೀರನ್ನು ತಡೆಯಲು ಚೆಕ್‌ಡ್ಯಾಂ ನಿರ್ಮಿಸುವ ಮೂಲಕ ಪ್ರವಾಸಿ ತಾಣ ಮಾಡಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಮಲ್ಲೇಶ್ವರ ಬೆಟ್ಟದ ಮೇಲೆ ೧.೧೫ ಕೋಟಿ ರೂ. ಅನುದಾನದಲ್ಲಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಡ್ಡದ ಮೇಲಿನ ನೂರಾರು ಎಕರೆ ಜಮೀನಿನಿಂದ ಮಳೆಗಾಲದಲ್ಲಿ ಹರಿದುಹೋಗುವ ನೀರನ್ನು ತಡೆಗಟ್ಟಬೇಕಿದೆ. ಗುಡ್ಡದ ಮಧ್ಯಭಾಗದಲ್ಲಿ ನೀರು ನಿಲ್ಲಿಸಲು ಸೂಕ್ತ ಪ್ರದೇಶವಿದೆ. ಸುತ್ತಲೂ ಹಸಿರು ವಾತಾವರಣ ನಿರ್ಮಾಣ, ದೊಡ್ಡಮಟ್ಟದಲ್ಲಿ ತಡೆಗೋಡೆ ನಿರ್ಮಾಣ, ಸಸಿ ಬೆಳೆಸುವುದು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಇದರಿಂದ ಅಂತರ್ಜಲ ಹೆಚ್ಚಳ, ಪ್ರಾಣಿಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.
ಪುರಸಭೆ ಮುಖ್ಯಾಽಕಾರಿ ವಿನಯಕುಮಾರ ಹೊಳೆಯಪ್ಪಗೋಳ ಮಾತನಾಡಿ, ೨೦೦೮ರಿಂದ ಈವರೆಗೂ ಗುಡ್ಡದಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಲಾಗಿದೆ. ನಿವಾಸಿಗಳ ಅಗತ್ಯಕೆ ತಕ್ಕಂತೆ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ಮಹಮದ್‌ರಫಿ ಮುದಗಲ್ಲ, ಫಕೀರಮ್ಮ ಚಲವಾದಿ, ಮಲ್ಲಮ್ಮ ಪಾಟೀಲ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ಸುಮಂಗಲಾ ರಾರಾವಿ, ದುರ್ಗೇಶ ಗೋಣೆಮ್ಮನವರ, ಸಂಗಮೇಶ ಹಾದಿಮನಿ, ಗುತ್ತಿಗೆದಾರ ಬಸವರಾಜ ಸಂಕಣ್ಣನವರ ಇದ್ದರು.