ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಐಡಿಎಸ್‌ಒ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.  folder
ಜಿಲ್ಲೆ

ಸರ್ಕಾರಿ ಶಾಲೆಗಳ ಅಭಿವೃದ್ಧಿ ಎಡಿಬಿ ಹೆಗಲಿಗೆ

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನೊಂದಿಗೆ (ಎಡಿಬಿ) ಸರ್ಕಾರ ಮಾಡಿಕೊಂಡಿರುವ ಒಪ್ಪಂದವನ್ನು ಕೈಬಿಟ್ಟು, ಶಾಲೆಗಳ ಉಳಿವಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿ, ಎಐಡಿಎಸ್‌ಒ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

* ಸರ್ಕಾರದ ಕ್ರಮ ವಿರೋಧಿಸಿ ಎಐಡಿಎಸ್‌ಒ ಪ್ರತಿಭಟನೆ

ಬೆಂಗಳೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನೊಂದಿಗೆ (ಎಡಿಬಿ) ಸರ್ಕಾರ ಮಾಡಿಕೊಂಡಿರುವ ಒಪ್ಪಂದವನ್ನು ಕೈಬಿಟ್ಟು, ಶಾಲೆಗಳ ಉಳಿವಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿ, ಎಐಡಿಎಸ್‌ಒ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳೊಂದಿಗೆ ವಿಲೀನಗೊಳಿಸುತ್ತಿದೆ. ಕೆಪಿಎಸ್ ಶಾಲೆಗಳೊಂದಿಗೆ ಸುತ್ತಮುತ್ತಲಿನ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ರಾಜ್ಯದಲ್ಲಿ 45 ಸಾವಿರ ಶಾಲೆಗಳನ್ನು ಮುಚ್ಚಲು ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಿದೆ. ಹೆಗ್ಗನೂರು ಕೆಪಿಎಸ್ ಶಾಲೆಗೆ ಸುತ್ತಮುಲಿನ ಶಾಲೆಗಳನ್ನು ವಿಲೀನಗೊಳಿಸಿರುವುದರಿಂದ 14 ಶಾಲೆಗಳು ಬಂದ್ ಆಗಿವೆ ಎಂದು ಕಿಡಿಕಾರಿದರು.

ಈಗಾಗಲೇ ಮುಚ್ಚಲಾಗಿರುವ ಸರ್ಕಾರಿ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಕ್ರಮವಹಿಸಬೇಕು. ಸರ್ಕಾರದ ಪ್ರಯತ್ನಗಳನ್ನು ನೋಡುತ್ತಿದ್ದರೆ ಹಿಂಬಾಗಿಲಿನಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ. ಎಡಿಬಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪತ್ರ ನೋಡುತ್ತಿದ್ದರೆ ನಾಡಿನ ಜನತೆಗೆ ಎಸಗಿರುವ ದ್ರೋಹ ಎಂದು ಖಂಡಿಸಿದರು.

2030ರ ಹೊತ್ತಿಗೆ ಕ್ಲಸ್ಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ಒಂದೇ ಕಡೆ ವಿಲೀನಗೊಳಿಸಿ ನಿರ್ವಹಣೆಗೆ ಕಾರ್ಪೊರೇಟ್ ಕಂಪನಿಗಳಿಂದ ಆರ್ಥಿಕ ನೆರವು ಪಡೆಯಲಾಗುತ್ತದೆ. ಆ ಕಂಪನಿಗಳಿಗೆ ತಕ್ಕ ಕಾರ್ಮಿಕರನ್ನು ಸಿದ್ಧಪಡಿಸುವ ಪಠ್ಯಕ್ರಮವನ್ನು ಕೆಪಿಎಸ್ ವ್ಯಾಗ್ನೆಟ್ ಶಾಲೆಗಳಲ್ಲಿ ಬೋಧಿಸುವ ಹುನ್ನಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುವ ಶಿಕ್ಷಕರ ನೇಮಕಾತಿಯು ಕೇವಲ ಕೆಪಿಎಸ್ ಶಾಲೆಗಳಿಗೆ ವಾತ್ರ ಸೀಮಿತಗೊಳ್ಳಲಿದೆ. ಇದನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಅಧ್ಯಕ್ಷೆ ಕೆ.ಎಸ್.ಅಶ್ವಿನಿ, ಉಪಾಧ್ಯಕ್ಷರಾದ ಸಿ.ಎಂ.ಅಪೂರ್ವ, ಹಣಮಂತ, ಅಭಯಾ ದಿವಾಕರ್, ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್ ಮತ್ತಿತರರು ಉಪಸ್ಥಿತರಿದ್ದರು.