ಶಿವಮೊಗ್ಗದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಅಭಿಯಾನವನ್ನು ಡಾ. ಎಲ್.ಮುರುಗನ್ ಉದ್ಘಾಟಿಸಿದರು. ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಡಿ.ಎಸ್.ಅರುಣ, ವಾದಿರಾಜ್, ಕೆ.ಬಿ.ಅಶೋಕ ನಾಯ್ಕ ಇತರರಿದ್ದರು. 
ಜಿಲ್ಲೆ

ಪಂಚತೀರ್ಥ ಪರಿಕಲ್ಪನೆಯಲ್ಲಿ 5 ಸ್ಥಳಗಳ ಅಭಿವೃದ್ಧಿ: ಸಚಿವ ಮುರುಗನ್

ಶಿವಮೊಗ್ಗ: ದೇಶದ ಸಂವಿಧಾನ ಎಂಬುದು ಕೇವಲ ದಾಖಲೆಯಲ್ಲ. ಪ್ರಜಾಪ್ರಭುತ್ವದ ತಾಯಿ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಇದು ಅನ್ವಯವಾಗುತ್ತದೆ ಎಂದು ಕೇಂದ್ರದ ರಾಜ್ಯಖಾತೆ ಸಚಿವ ಡಾ. ಎಲ್.ಮುರುಗನ್ ಹೇಳಿದರು.

ಜಿಲ್ಲಾ ಬಿಜೆಪಿಯಿಂದ ಗುರುವಾರ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಅಭಿಯಾನ ಉದ್ಘಾಟಿಸಿ ಮಾತನಾಡಿ, ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಬಿಜೆಪಿ ದೇಶದ ಸಂವಿಧಾನಕ್ಕೆ ನೀಡುತ್ತಿರುವ ಗೌರವದ ಪ್ರತೀಕ ಎಂದು ತಿಳಿಸಿದರು.

ಸಂವಿಧಾನ ಬದಲಿಸಿದ್ದು ಯಾರು? ಎಂಬ ಕೃತಿಯಲ್ಲಿ ಸಂವಿಧಾನವನ್ನು ಕಾಂಗ್ರೆಸ್ ಹೇಗೆ ಶಿಥಿಲಗೊಳಿಸಿತು ಎಂಬುದನ್ನು ವಿಕಾಸ್ ಕುಮಾರ್ ಎಂಬುವವರು ಸುದೀರ್ಘವಾಗಿ ವಿವರಿಸಿದ್ದಾರೆ. ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಅನಾವರಣಗೊಂಡಿದ್ದು ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ. ಅದುವರೆಗೂ ಕಾಂಗ್ರೆಸ್‌ನವರು ಭಾವಚಿತ್ರ ಅಳವಡಿಸಲು ಉದಾಸೀನತೆ ತೋರಿದ್ದರು ಎಂದು ಟೀಕಿಸಿದರು.

ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಕೇಂದ್ರ ಸರ್ಕಾರ ಪಂಚತೀರ್ಥ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇನ್ನು ಎರಡು ವರ್ಷದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಖ್ಯಾಥ ಅರ್ಥಶಾಸ್ತ್ರಜ್ಞರೂ ಆಗಿದ್ದ ಅಂಬೇಡ್ಕರ್ ಅವರ ಸವಿನೆನಪಿಗೆ ಡಿಜಿಟಲ್ ವ್ಯವಹಾರಕ್ಕೆಂದು ರೂಪಿಸಿದ ಆ್ಯಪ್‌ಗೆ ಪ್ರಧಾನಿ ನರೇಂದ್ರ ಮೋದಿ ಭೀಮ್ ಯುಪಿಐ ಎಂದು ನಾಮಕರಣ ಮಾಡಿದ್ದಾರೆ. ಇದು ಅಂಬೇಡ್ಕರ್ ಬಗ್ಗೆ ಬಿಜೆಪಿ ತೋರಿದ ಗೌರವವಾಗಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಮಾಜಿ ಶಾಸಕರಾದ ಕೆ.ಬಿ.ಅಶೋಕ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಮು ಕೋಹಳ್ಳಿ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಮತ್ತಿತರರಿದ್ದರು.