ಬೆಳಗಾವಿ ತಾಲೂಕಿನ ಸುಳಗಾದಲ್ಲಿ ಶನಿವಾರ ರಾಯಚೂರು-ಬಾಚಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜತೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿಪೂಜೆ ನೆರವೇರಿಸಿದರು. ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಬಾಳ್ಕರ್, ಬಾಬಣ್ಣ ನರೋಟಿ, ಮಾರುತಿ ಪಾಟೀಲ ಇತರರಿದ್ದರು. 
ಜಿಲ್ಲೆ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ

ಶಂಕರ ಗೆಜ್ಜಿ

ಬೆಳಗಾವಿ: ಅನಗತ್ಯ ರಾಜಕೀಯ ಮಾಡುವ ವಿಘ್ನ ಸಂತೋಷಿಗಳ ಕುರಿತು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳಗಾ ಗ್ರಾಮದಲ್ಲಿ ಶನಿವಾರ, ರಾಯಚೂರು-ಬಾಚಿ ರಾಜ್ಯ ಹೆದ್ದಾರಿಯ 20 ಕಿ.ಮೀ. ಅಭಿವೃದ್ಧಿಪಡಿಸುವ 9 ಕೋಟಿ ರೂ. ವೆಚ್ಚದ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಜತೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೇವಲ ಭಾಷೆ, ಧರ್ಮದ ವಿಚಾರದಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಮಾಡುತ್ತಾರೆ. ಅಂತವರಿಗೆ ಅಭಿವೃದ್ಧಿಯ ಅರ್ಥವೇ ಗೊತ್ತಿಲ್ಲ. ಅವರು ವಿಘ್ನ ಸಂತೋಷಿಗಳು. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವತ್ತೂ ರಾಜಕೀಯ ಮಾಡುವುದಿಲ್ಲ. ಯಾರು, ಯಾವ ಪಕ್ಷ, ಯಾವ ಜಾತಿ ಎನ್ನುವ ಕುರಿತು ಯೋಚಿಸುವುದೂ ಇಲ್ಲ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿ, ಹೆಬ್ಬಾಳ್ಕರ್ ಅವರು, ಪ್ರತಿವರ್ಷ ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್, ಮುಖಂಡರಾದ ಬಾಬಣ್ಣ ನರೋಟಿ, ಮಾರುತಿ ಪಾಟೀಲ, ಮಹಾದೇವ ಕಂಗ್ರಾಳ್ಕರ್, ಬಾವುರಾವ್ ಗಡ್ಕರಿ, ಸಂಜಯ್ ಇತರರಿದ್ದರು. ಸುಳಗಾ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರೈತ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ವೇದಿಕೆಗೆ ಬಂದ ವ್ಯಕ್ತಿಯೋರ್ವ ಸಚಿವರ ನೆರವು ನೆನಪಿಸಿಕೊಂಡು, ನಿಮ್ಮ ಋಣ ತೀರಿಸಲು ನನ್ನಿಂದ ಸಾಧ್ಯವಿಲ್ಲ ಎನ್ನುತ್ತ ಕಣ್ಣೀರು ಹಾಕಿದ ಘಟನೆ ನಡೆಯಿತು.