ಮೈಸೂರು: ನಗರಪಾಲಿಕೆ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದು ಒಂದು ವರ್ಷ ಕಳೆದರೂ ಸರ್ಕಾರ ಇನ್ನೂ ಚುನಾವಣೆ ನಡೆಸದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ.ಮಂಜು ಹೇಳಿದರು.
ಪಾಲಿಕೆ ಅವಧಿ ಮುಗಿದು 15 ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಚುನಾವಣೆ ನಡೆಸಲು ಹಿಂದೆ ಮುಂದೆ ನೋಡುತ್ತಿದೆ. ಇದರಿಂದಾಗಿ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಪಾಲಿಕೆಯಲ್ಲೂ ಕೆಲಸ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಚುನಾವಣೆ ನಡೆಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಚುನಾವಣೆ ನಡೆಸುವಂತೆ ಈಗಾಗಲೇ ಹಲವು ಸಂಘಟನೆಗಳು, ಪ್ರಗತಿಪರರು, ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ನಗರದ ಜನತೆಯ ಬೇಡಿಕೆಯೂ ಇದೇ ಆಗಿದೆ. ಆದರೆ ಕಾಂಗ್ರೆಸ್ ನಾಯಕರು ಕೇವಲ ಅಧಿಕಾರ ವಿಕೇಂದ್ರೀಕರಣ ಎಂದು ಬಾಯಿ ಮಾತಿನಲ್ಲೇ ಹೇಳಿ ಸುಮ್ಮನಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತೆರಿಗೆ ಸಂಗ್ರಹದಲ್ಲಿಯೂ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ. ಇದರಿಂದ 40 ಕೋಟಿ ರೂ. ಇದ್ದ ತೆರಿಗೆ ಬಾಕಿ ಈಗ 450 ಕೋಟಿ ರೂ.ಗೆ ಏರಿದೆ. ಜನಪ್ರತಿನಿಧಿಗಳು ಇಲ್ಲದ ಕಾರಣ ಕೇಂದ್ರ ಸರ್ಕಾರದಿಂದ ನಾನಾ ಯೋಜನೆಯಡಿ ಬಿಡುಗಡೆ ಆಗಬೇಕಾಗಿದ್ದ 65 ಕೋಟಿ ರೂ. ಅನುದಾನ ಎರಡು ವರ್ಷದಲ್ಲಿ ವಾಪಸ್ ಹೋಗಿದೆ ಎಂದು ಹೇಳಲಾಗುತ್ತಿದೆ ಎಂದರು.
ಜೆಡಿಎಸ್ ಮುಖಂಡರಾದ ಪ್ರೇಮಾ ಶಂಕರೇಗೌಡ ಮಾತನಾಡಿ, ಸರ್ಕಾರದ ಅನುದಾನ, ಆಸ್ತಿ ತೆರಿಗೆ ಸಂಗ್ರಹಿಸಿದೆ ನಗರದ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ನಗರದ ಬೆಳವಣಿಗೆ, ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಕೂಡಲೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎಂ.ಶಿವಣ್ಣ ಇತರರು ಇದ್ದರು.