ಮಡಿಕೇರಿ: ಸಹಕಾರಿಗಳ ಉತ್ತಮ ಸ್ಪಂದನೆಯಿಂದ ಸಂಘವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಂಡುವಂಡ.ಪಿ.ಮುತ್ತಪ್ಪ ಹೇಳಿದರು.
ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಮಡಿಕೇರಿ ಇದರ ೨೦ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೨೦೦೫ರಲ್ಲಿ ಹಿರಿಯ ಸಹಕಾರಿ ಹಾಗೂ ಮಾಜಿ ಸಚಿವರು ಮೇರಿಯಂಡ.ಸಿ.ನಾಣಯ್ಯ, ಮುಖ್ಯ ಪ್ರವರ್ತಕ ಚೋವಂಡ.ಡಿ.ಕಾಳಪ್ಪನವರು ಹಾಗೂ ಕೊಡವ ಸಮಾಜ ಮಡಿಕೇರಿಯ ಅಂದಿನ ಆಡಳಿತ ಮಂಡಳಿ ಸದಸ್ಯರ ದೂರ ದೃಷ್ಟಿಯಿಂದ ಈ ಸಂಘವನ್ನು ಸ್ಥಾಪಿಸಲಾಗಿದೆ. ಇಂದಿಗೆ ೧೯ ವರ್ಷಗಳ ಅವಧಿ ಪೂರೈಸಿ ೨೦ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಾರಂಭದಲ್ಲಿ ೨೯೩ ಸದಸ್ಯರಿಂದ ಕಾರ್ಯಾರಂಭಿಸಿದ ಸಂಸ್ಥೆ ಇದೀಗ ಒಟ್ಟು ೨೧೩೪ ಸದಸ್ಯರಿದ್ದು ಪಾಲು ಹಾಣ ರೂ.೯೪.೫೬ ಲಕ್ಷಗಳಿದ್ದು, ಸದಸ್ಯರುಗಳ ಪ್ರಯೋಜನಕ್ಕಾಗಿ ಮರಣ ನಿಧಿ ಸ್ಥಾಪಿಸಿ ಸ್ವರ್ಗಸ್ಥರಾದ ಸದಸ್ಯರುಗಳ ಕುಟುಂಬಕ್ಕೆ ರೂ.೧೦೦೦೦/- ಮರಣ ನಿಧಿ ಸಹಾಯಧನ ನೀಡಲಾಗುತ್ತಿದ್ದು ಹಾಲಿ ೧೨೬೦ ಸದಸ್ಯರುಗಳ ಮರಣ ನಿಧಿ ಸದಸ್ಯರಾಗಿರುತ್ತಾರೆ ಎಂದು ಅಧ್ಯಕ್ಷರು ತಿಳಿಸಿದರು.
ಸಹಕಾರಿಯಲ್ಲಿ ಸದಸ್ಯರಿಂದ ಉತ್ತಮ ಸ್ಪಂದನೆಯೊಂದಿಗೆ ವಿವಿಧ ತರಹದ ಠೇವಣಿಯನ್ನು ಆಕರ್ಷಿಕ ಬಡ್ಡಿದರದಲ್ಲಿ ಪಡೆಯುತ್ತಿದ್ದು ನಿರಖು ಠೇವಣಿ ಹಾಗೂ ಇತರ ಠೇವಣಿ ಸೇರಿ ರೂ. ೫೧೨.೮೯ ಲಕ್ಷ ಇರುತ್ತದೆ. ಅಲ್ಲದೆ ವಿವಿಧ ರೀತಿಯ ಸಾಲಗಳನ್ನು ಸಹಕಾರಿಯ ವತಿಯಿಂದ ನೀಡಲಾಗುತ್ತಿದೆ. ಜಾಮೀನು ಸಾಲ, ಗೃಹನಿರ್ಮಾಣ ಸಾಲ, ಆಭರಣ ಸಾಲ ನಿರಖು ಠೇವಣಗಳ ಮೇಲಿನ ಸಾಲ ಸೌಲಭ್ಯ ನೀಡುತ್ತಿದ್ದು, ವರದಿ ಸಾಲಿನ ಅಂತ್ಯಕ್ಕೆ ರೂ.೪೫೨.೯೯ ಲಕ್ಷ ಸಾಲ ನೀಡಲಾಗಿದೆ. ಶೇ.೯೬.೫೦ ಸಾಲ ವಸೂಲಾತಿಯಾಗಿರುತ್ತದೆ. ಸಾರ್ವಜನಿಕರಿಗೆ ಮತ್ತು ಸಹಕಾರಿಗಳಿಗೆ ಆರ್‌ಟಿಸಿ, ಈ- ಸ್ಟಾಂಪ್, ಜೆರಾಕ್ಸ್ ನಂತಹ ಸೌಲಭ್ಯವನ್ನು ಒದಗಿಸುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ವಿವಿಧ ಬ್ಯಾಂಕುಗಳಲ್ಲಿ ೩೧೬.೧೯ ಲಕ್ಷ ಹೂಡಿಕೆ ಮಾಡಲಾಗಿದ್ದು ೨೦೨೩-೨೦೨೪ನೇ ಸಾಲಿನಲ್ಲಿ ರೂ.೨೭.೯೬ ಲಕ್ಷ ಲಾಭಗಳಿಸಿದೆ. ಮಹಾಸಭೆಯಲ್ಲಿ ಸಹಕಾರಿಯ ಸದಸ್ಯರು ಮತ್ತು ಮಕ್ಕಳಿಗೆ ವಿವಿಧ ಕ್ಷೇತ್ರದ ಸಾಧನೆಗೆ ಪ್ರೋತ್ಸಾಹಧನ ನೀಡಲಾಯಿತು ಎಂದರು.
ಇವೆಲ್ಲದರ ಹಿಂದೆ ನಮ್ಮ ಹಿರಿಯ ಸಹಕಾರಿಗಳು, ದಾನಿಗಳು, ಸದಸ್ಯರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪರಿಶ್ರಮ ಮತ್ತು ಉತ್ತಮ ಸ್ಪಂದನೆಯಿಂದ ಇಂದು ಸಹಕಾರಿಯು ಪ್ರಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಮಂದನೆರವಂಡ.ಜಿ.ಉಷಾ ಉತ್ತಯ್ಯ, ನಿರ್ದೇಶಕರು ಹಾಗೂ ಪ್ರವರ್ತಕರುಗಳಾದ ಚೋವಂಡ.ಡಿ.ಕಾಳಪ್ಪ, ಹಿರಿಯ ನಿರ್ದೇಶಕರುಗಳಾದ ಮಣವಟ್ಟೀರ.ಬಿ.ಮಾಚಯ್ಯ, ಆಲೆಮಾಡ.ಎ.ಕಾರ್ಯಪ್ಪ, ನಾಟೋಳಂಡ.ಡಿ.ಚರ್ಮಣ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ.ಸಿ.ನೀಮಾ(ಕಳ್ಳೇಂಗಡ), ವ್ಯವಸ್ಥಾಪಕ ಚೋವಂಡ ಗೌತಮ್ ಮೇದಪ್ಪ ಇತರರು ಉಪಸ್ಥಿತರಿದ್ದರು.